You are currently viewing ಸಿಹಿ ಹಂಚಬೇಕಿದ್ದ ಸಕ್ಕರೆ ಕಾರ್ಖಾನೆ ಕಾಯಿಲೆ ಹಬ್ಬಿಸುತ್ತಿದೆ, ಜನ ಸಾಮಾನ್ಯರಿಗೆ ನ್ಯಾಯ ಕೊಡಿಸಬೇಕಿದ್ದ ಅಧಿಕಾರಿಗಳು ಕಣ್ಣಿದ್ದು ಕುರುಡಾಗಿದ್ದಾರೆ.

ಸಿಹಿ ಹಂಚಬೇಕಿದ್ದ ಸಕ್ಕರೆ ಕಾರ್ಖಾನೆ ಕಾಯಿಲೆ ಹಬ್ಬಿಸುತ್ತಿದೆ, ಜನ ಸಾಮಾನ್ಯರಿಗೆ ನ್ಯಾಯ ಕೊಡಿಸಬೇಕಿದ್ದ ಅಧಿಕಾರಿಗಳು ಕಣ್ಣಿದ್ದು ಕುರುಡಾಗಿದ್ದಾರೆ.

ವಿಜಯನಗರ… ಹೌದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಬೀರಬ್ಬಿ ಗುರುಸ್ವಾಮಿ ಗುಡ್ಡದ ಬಳಿಯಲ್ಲಿ ಇತ್ತೀಚೆಗೆ ಪ್ರಾರಂಭವಾಗಿರುವ ಮೈಲಾರ್ ಶುಗರ್ಸ್ ನಿಂದ ಇಲ್ಲಿನ ಸ್ಥಳೀಯರಿಗೆ ದುರ್ವಾಸನೆಯ ಕಿರಿಕಿರಿ ಉಂಟಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಸಕ್ಕರೆ ಕಾರ್ಖಾನೆಯಿಂದ ಉಂಟಾಗುವ ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆ ಇಲ್ಲದ ಕಾರಣಕ್ಕೆ ಕಾರ್ಖಾನೆಯಲ್ಲಿ ಬರುವ ಮಲೈಸೆಸ್ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನ ಕಂಡ ಕಂಡಲ್ಲಿ ಸುರಿಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮೊನ್ನೆ ಸಂಜೆ ಮಲೈಸಸ್ ತ್ಯಾಜ್ಯ ತುಂಬಿಕೊಂಡು ಕಾರ್ಖಾನೆಯಿಂದ ಹೊರಟಿದ್ದ ಟ್ರಾಕ್ಟರ್ ಒಂದನ್ನ ತಡೆದ ಸ್ಥಳೀಯರು ಕಾರ್ಖಾನೆಯ ಬೇಜವಾಬ್ದಾರಿತನದ ವಿರುದ್ದ ಹರಿಹಾಯ್ದಿದ್ದಾರೆ. ತೂತು ಬಿದ್ದು ಹಾಳಾಗಿರುವ ಟ್ಯಾಂಕರ್ ಮೂಲಕ ಮಲೈಸಸ್ ತ್ಯಾಜ್ಯ ತುಂಬಿ ಬೇರೆಡೆ ಸಾಗಾಟಮಾಡುತಿದ್ದ ಟ್ಯಾಂಕರ್ ನಿಂದ ರಸ್ತೆಯುದ್ದಕ್ಕೂ ತ್ಯಾಜ್ಯ ಚೆಲ್ಲಿ ದುರ್ನಾತ ಉಂಟಾಗುತ್ತಿದೆ, ಇದರಿಂದ ವಾಹನ ಸವಾರರಿಗೆ ಮಾತ್ರವಲ್ಲದೆ ರಸ್ತೆಯ ಅಕ್ಕಪಕ್ಕದ ಜನ ಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ ಎಂದು ಟ್ರಾಕ್ಟರ್ ತಡೆ ಹಿಡಿದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಮಲೈಸಸ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನ ಸಕ್ಕರೆ ಕಾರ್ಖಾನೆಯಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ತಮ್ಮ ಜಮೀನುಗಳಿಗೆ ಸಾಗಾಟಮಾಡಿಕೊಂಡು ಭೂಮಿಯ ಫಲವತ್ತತೆಯನ್ನ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಸಕ್ಕರೆ ಕಾರ್ಖಾನೆಯಿಂದ ತಮ್ಮ ಜಮೀನಿಗೆ ಈ ತ್ಯಾಜ್ಯ ಸಾಗಾಟಮಾಡುವ ರೀತಿ ಮಾತ್ರ ಬೇಕಾಬಿಟ್ಟಿಯಾಗಿದೆ ಎನ್ನುತ್ತಾರೆ ಸ್ಥಳೀಯರು, ಸಕ್ಕರೆ ಕಾರ್ಖಾನೆಯಿಂದ ಎಂಟರಿಂದ ಹತ್ತು ಕಿಲೋಮಿರ್ ದೂರದಲ್ಲಿ ಜಮೀನುಗಳಿದ್ದು  ದಾರಿ ಮದ್ಯದಲ್ಲಿ ಹಿರೇಹಡಗಲಿ ಗ್ರಾಮ ಇದೆ. ಇದೇ ಗ್ರಾಮದ ಮದ್ಯದಲ್ಲೇ ತ್ಯಾಜ್ಯಾ ಸಾಗಾಟ ಟ್ರಾಕ್ಟರ್ ಹಾದು ಹೋಗುತ್ತವೆ, ಹೀಗೆ ಹೋಗುವ ಟ್ರಾಕ್ಟರ್ ಗಳು ತ್ಯಾಜ್ಯವನ್ನ ದಾರಿಯುದ್ದಕ್ಕೂ ಬೀಳಿಸಿ ಹೋಗುವುದರಿಂದ ದುರ್ನಾತದ ತೊಂದರೆ ಸ್ಥಳೀಯರಿಗೆ ಹೆಚ್ಚಾಗಿದೆ.

ಈ ಸಂಭಂದ ಇಲ್ಲಿನ ಸ್ಥಳೀಯ ಗ್ರಾಮಪಂಚಾಯ್ತಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಇನ್ನು ದುರಂತ ಎಂದರೆ ಇಂತದ್ದೊಂದು ದುರ್ನಾತ ಹೊತ್ತ ಟ್ರಾಕ್ಟರ್ ಗಳು ಪ್ರತಿ ದಿನ ಸಂಚರಿಸುವುದು ಹಿರೇಹಡಗಲಿ ಪೊಲೀಸ್ ಠಾಣೆಯ ಮುಂದೆಯೆ, ಹೀಗಿದ್ದರು ಇಲ್ಲಿನ ಪೊಲೀಸ್ ಅಧಿಕಾರಿಗಳು ಮೂಗುಮುಚ್ಚಿಕೊಂಡು ಸುಮ್ಮನಿದ್ದಾರೆ. ಅದಲ್ಲದೆ ಹೀಗೆ ತ್ಯಾಜ್ಯ ಸಾಗಾಟಮಾಡುವ ಬಹುತೇಕ ಟ್ರಾಕ್ಟರಗಳು ನೊಂದಣಿಯಾಗದೆ (ನಂಬರ್ ಪ್ಲೇಟ್ ಇಲ್ಲದೆ) ರಸ್ತೆಯ ಮೇಲೆ ಸಂಚರಿಸಿದರು ಇಲ್ಲಿನ ಪೊಲೀಸ್ ಅಧಿಕಾರಿಗಳು ಸುಮ್ಮನಿದ್ದಾರೆ ಯಾಕೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

ಇನ್ನು ಇಂತಾ ನೋಂದಣಿಯಾಗದ ಟ್ರಾಕ್ಟರ್ ಗಳನ್ನ ರಸ್ತೆಯ ಮೇಲೆ ಓಡಿಸುವ ಸಕ್ಕರೆ ಕಾರ್ಖಾನೆಯ ವಿರುದ್ದ ನೀವು ಯಾಕೆ ಕ್ರಮ ಜರುಗಿಸುತ್ತಿಲ್ಲ ಎಂದು ಹಿರೇಹಡಗಲಿ ಪೋಲೀಸ್ ಠಾಣೆಯ ಅಧಿಕಾರಿಯನ್ನ ಸ್ಥಳೀಯ ಹೋರಾಟಗಾರ ಮಂಜುನಾಥ ಅಕ್ಕಿ ಪ್ರಶ್ನಿಸಿದರೆ, ರಸ್ತೆಯಲ್ಲಿ ಟ್ರಾಕ್ಟರ್ ನಿಲ್ಲಿಸುವ ಅಧಿಕಾರ ನಿಮಗೆ ಇದೆಯಾ, ಒಂದು ವೇಳೆ ಸಕ್ಕರೆ ಕಾರ್ಖಾನೆಯವರು ನಿಮ್ಮ ವಿರುದ್ದ ದೂರು ಕೊಟ್ಟರೆ ನಿಮಗೆ ತೊಂದರೆ ನೋಡಿ ಎಂದು ಹೇಳುವ ಮೂಲಕ ಹೋರಾಟಗಾರರನ್ನ ಹೆದರಿಸುವ ಪ್ರಯತ್ನವನ್ನ ಇಲ್ಲಿನ ಪಿ.ಎಸ್.ಐ. ಮಾಡಿದ್ದಾರೆ ಎಂದು ಮಂಜುನಾಥ ಅಕ್ಕಿಯವರು ಆರೋಪಿಸಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ಜನ ಸಾಮಾನ್ಯರ ವಾಹನಗಳನ್ನ ತಡೆದು ದಂಡ ಹಾಕುವ ಪೊಲೀಸರು ಈ ಕಾರ್ಖಾನೆಯ ಟ್ರಾಕ್ಟರ್ ಗಳು ನೊಂದಣಿಯಾಗದೆ ರಸ್ತೆಯ ಮೇಲೆ ಸಂಚರಿಸಿದರೂ ಅವರ ವಿರುದ್ದ ಯಾಕೆ ಕ್ರಮ ಜರುಗಿಸುತ್ತಿಲ್ಲ ಪೊಲೀಸರು ಹಿರೇಹಡಗಲಿಯ ಕೆ.ಆರ್.ಎಸ್.ಪಕ್ಷದ ಹೋರಾಟಗಾರರು ಪ್ರಶ್ನಿಸಿದ್ದಾರೆ.

ಇನ್ನು ಈ ಮೈಲಾರ ಸಕ್ಕರೆ ಕಾರ್ಖಾನೆ ಇರುವುದು ತುಂಬಿನ ಕೇರಿ ಕಾದಿಟ್ಟ ಅರಣ್ಯದ ಅಂಚಿನಲ್ಲಿ. ಹಾಗಾಗಿ ಕಾಡು ಪ್ರಾಣಿಗಳು ಈ ತ್ಯಾಜ್ಯವನ್ನ ಕುಡಿದು ನಾನಾ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಕೂಡ ಇದೆ.ಕಾರಣ ಕೆಲವು ಬಾರಿ ಮಲೈಸಸ್ ತ್ಯಾಜ್ಯವನ್ನ ರಸ್ತೆ ಬದಿಯ ಕಾಲುವೆಗೆ ಸುರಿದ ಕಾರಣಕ್ಕೆ ಕಾಡಿನ ನರಿ ತೋಳ ಸೇರಿದಂತೆ ಇನ್ನಿತರ ಪ್ರಾಣಿಗಳು ಆ ತ್ಯಾಜ್ಯವನ್ನ ಕುಡಿದು ತೊಂದರೆ ಅನುಭವಿಸಿರುವುದನ್ನೂ ಸ್ಥಳೀಯರು ಪ್ರತ್ಯಕ್ಷವಾಗಿ ಕಂಡಿದ್ದಾರೆ. ಹಾಗಾಗಿ ಇಲ್ಲಿನ ವನ್ಯಜೀವಿಗಳಿಗೂ ಈ ಸಕ್ಕರೆ ಕಾರ್ಖಾನೆ ಮಾರಕವಾಗಿ ಪರಿಣಮಿಸುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. 

ಸಹಜವಾಗಿ ಯಾವುದೇ ಸಕ್ಕರೆ ಕಾರ್ಖಾನೆ ಪ್ರಾರಂಬಿಸಿದರೂ ಕಾರ್ಖಾನೆಯಿಂದ ಉಂಟಾಗುವ ಬಹುತೇಕ ತ್ಯಾಜ್ಯವನ್ನ ಸ್ಪಿರಿಟ್ ತಯಾರಿಸಿ ಅದನ್ನ ಮದ್ಯ ತಯಾರಿಕೆಯಲ್ಲಿ ಬಳಸಲಾಗುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಇನ್ನು ಸ್ಪಿರಿಟ್ ತಯಾರದ ಬಳಿಕ ಉಳಿದ ತ್ಯಾಜ್ಯವನ್ನ ಸರಿಯಾದ ಕ್ರಮದಲ್ಲಿ ವಿಲೇವಾರಿಮಾಡಬೇಕು, ಆದರೆ ಅದ್ಯಾವುದನ್ನೂ ಸರಿಯಾಗಿ ಮಾಡುತ್ತಿಲ್ಲ ಸಕ್ಕರೆ ಕಾರ್ಖಾನೆ. ಇನ್ನು ಇಂತಾ ಎಲ್ಲಾ ಮೂಲ ಸೌಕರ್ಯಗಳನ್ನ ನೋಡಿಕೊಂಡೇ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆ ಪ್ರಾರಂಬಿಸಲು ಪರವಾನಿಗೆ ನೀಡಿರುತ್ತೆ,  ಒಂದು ವೇಳೆ ಕಾರ್ಖಾನೆ ಪ್ರಾರಂಭವಾದ ಮೇಲೆಯೂ ನಿಯಮಗಳನ್ನ ಮೀರಿದರೆ ಅಂತಾ ಕಾರ್ಖಾನೆಗಳ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು, ಅಥವಾ ಪರವಾನಿಗೆ ರದ್ದುಪಡಿಸುವ ಕೆಲಸವನ್ನ ಮಾಲಿನ್ಯ ನಿಯಂತ್ರಣ ಮಂಡಳಿಮಾಡಬೇಕು. ಆದರೆ ಅದ್ಯಾವುದನ್ನೂ ಮಾಡದ ಇಲ್ಲಿನ ಅಧಿಕಾರಿಗಳ ಗುಂಪು ಸಕ್ಕರೆ ಕಾರ್ಖಾನೆಯ ಅಧಿಕಾರಿಗಳ ಕೈಗೊಂಬೆಯಾಗಿ ಕುಣಿಯುತಿದ್ದಾರೆ. ಅದರ ಪರಿಣಾಮ ಇಲ್ಲಿನ ಜನ ಸಾಮಾನ್ಯರು ಹಲವು ತೊಂದರೆಗಳಿಗೆ ತುತ್ತಾಗುತಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.