You are currently viewing ಅವಳಿ ಗಣಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಕರಡಿ ಧಾಮ, ಹೀಗಿದ್ದರು ಮಾನವನಿಗೆ  ತಪ್ಪುತ್ತಿಲ್ಲ ಜಾಂಬವಂತನ ಕಾಟ.

ಅವಳಿ ಗಣಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಕರಡಿ ಧಾಮ, ಹೀಗಿದ್ದರು ಮಾನವನಿಗೆ  ತಪ್ಪುತ್ತಿಲ್ಲ ಜಾಂಬವಂತನ ಕಾಟ.

ವಿಜಯನಗರ…ಹೌದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ಒಂದು ಕರಡಿದಾಮ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವ್ಯಾಪ್ತಿಗೆ ಒಳಪಡುವ ದರೋಜಿ ಕರಡಿ ಧಾಮ ಮತ್ತೊಂದು. ಹೀಗೆ ಎರಡೂ ಅವಳಿ ಗಣಿ ಜಿಲ್ಲೆಗಳಲ್ಲಿ ಒಂದೊಂದು ಕರಡಿ ಧಾಮ ಇದ್ದರು ಕರಡಿಗಳ ಕಾಟ ಮಾತ್ರ ಇಲ್ಲಿನ ಜನರಿಗೆ ತಪ್ಪುತ್ತಿಲ್ಲ, ಕೂಡ್ಲಿಗಿ ತಾಲೂಕಿನ ವ್ಯಾಪ್ತಿಯಲ್ಲಂತೂ ಪ್ರತಿ ವರ್ಷ ಒಂದಲ್ಲ ಒಂದು ಕರಡಿ ದಾಳಿ ಪ್ರಕರಣಗಳು ಸರ್ವೇ ಸಾಮಾನ್ಯವಾಗಿವೆ. ಇದರಿಂದ ಅಂಗವೈಕಲ್ಯ ಆದೋರು ಎಷ್ಟೊ ಜನ, ಜೀವ ಕಳೆದುಕೊಂಡ ಬಡ ರೈತರೆಷ್ಟೊ, ಹೀಗೆ ಕರಡಿಗಳ ಕಾಟ ಇದ್ದರೂ ಬಡ ರೈತ ಮಾತ್ರ ತನ್ನ ಜಮೀನಿಗೆ ಹೋಗಿ ಕೆಲಸಮಾಡುವುದು ಮಾತ್ರ ತಪ್ಪುವುದಿಲ್ಲ.

ಅದರಲ್ಲೂ ಮುಂಗಾರು ಪ್ರಾರಂಭ ಆಗಿ ಬಿತ್ತನೆ ಮುಗಿದು ಬೆಳೆ ಬೆಳೆದು ನಿಂತರೆ ರೈತರು ಜೀವ ಕೈಲಿಡಿದು ತಮ್ಮ ಜಮೀನಿಗೆ ಹೋಗಬೇಕಾದ ಅನಿವಾರ್ಯತೆ.
ಇತ್ತೀಚೆಗೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಗೊಲ್ಲರಹಳ್ಳಿ ಗ್ರಾಮದ  ಹನುಮಂತ ದೇವರ ದೇವಾಲಯದ ಬಳಿ ಕರಡಿಗಳು ಪ್ರತ್ಯಕ್ಷವಾಗಿರೋದು ಜನರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಸುತ್ತಲೂ ಸುಮಾರು ಐದಾರು ಕರಡಿಗಳು ಹೊಲಗಳಲ್ಲಿ ಬೀಡುಬಿಟ್ಟಿವೆ ಎಂದು ರೈತರು ದೂರಿದ್ದಾರೆ .    ಸಮೀಪದ ಕಾಡಿನೊಳಗಿಂದ ಬಂದ ಕರಡಿಗಳು  ರೈತರನ್ನ ನಿದ್ದೆಗೆಡಿಸಿದ್ದು ಜಮೀನಿಗೆ ಹೋಗಿ ಬೆಳಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡುವ ರೈತರು ತಮ್ಮ ಮೇಲೆ ಕರಡಿಗಳು ಯಾವಾಗ ದಾಳಿಗೆ ಮಾಡುತ್ತವೆ ಎಂಬ ಆತಂಕದಲ್ಲಿ  ಬದುಕು ಸಾಗಿಸುತಿದ್ದಾರೆ. ಕೆಲವರಂತೂ ಕರಡಿ ಭಯದಿಂದ ಜಮೀನಿಗೆ ಹೋಗಿ ಕೆಲಸಮಾಡುವುದನ್ನ ಸಹ ನಿಲ್ಲಿಸಿದ್ದಾರೆ.

ಹೀಗೆ ಅರಣ್ಯದ ಅಂಚಿನಲ್ಲಿರುವ ಗ್ರಾಮದ ಕಡೆ ಮುಖಮಾಡಿರುವ ಕರಡಿಗಳನ್ನ ಹಿಡಿದು ಬೇರೆಡೆ ಸಾಗಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.  ಗೊಲ್ಲರಹಳ್ಳಿ ಗ್ರಾಮದ ಪ್ರವೇಶ ಬಳಿಯ ಕಾಳಮ್ಮನ ಬಂಡೆಯ ಕೂಗಳತೆ ದೂರದಲ್ಲೇ ಸರ್ಕಾರಿ ಶಾಲೆಯಿದೆ, ಹೀಗಿರುವಾಗ ಇಲ್ಲಿನ ಶಾಲಾ ಮಕ್ಕಳಿಗೆ ಏನಾದರು ತೊಂದರೆ ಆಗಬಹುದೆಂಬ ಆತಂಕ ಗ್ರಾಮಸ್ಥರಲ್ಲಿದೆ. ಹಾಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬೇಗನೆ ಕರಡಿಯನ್ನು  ಸೆರೆ ಹಿಡಿದು ಜನರಲ್ಲಿ ಮೂಡಿರುವ ಭಯವನ್ನು ದೂರ ಮಾಡಬೇಕು ಎಂದು ಗೊಲ್ಲರಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.