You are currently viewing ಸುಪಾರಿ( ಅಡಿಕೆ) ಕಳ್ಳತನ ನಿಯಂತ್ರಣಕ್ಕೆ ಸಿ.ಸಿ.ಕ್ಯಾಮರ ಅಳವಡಿಕೆಗೆ ದಾವಣಗೇರಿ ಗ್ರಾಮೀಣ ಪೊಲೀಸರು.

ಸುಪಾರಿ( ಅಡಿಕೆ) ಕಳ್ಳತನ ನಿಯಂತ್ರಣಕ್ಕೆ ಸಿ.ಸಿ.ಕ್ಯಾಮರ ಅಳವಡಿಕೆಗೆ ದಾವಣಗೇರಿ ಗ್ರಾಮೀಣ ಪೊಲೀಸರು.

ದಾವಣಗೇರಿ… ಒಂದಾನೊಂದು ಕಾಲದಲ್ಲಿ ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಸಿಗದು ಎನ್ನುವ ಗಾದೆ ಮಾತೊಂದಿತ್ತು. ಆದರೆ ಈಗ ಆ ಮಾತು ಬದಲಾಗಿದೆ. ಮಾನ ಹೋದರು ಹೋಗಲಿ ಅಡಿಕೆಯನ್ನೇ ಕದಿಯಬೇಕೆಂದುಕೊಂಡಿದ್ದಾರೆ ಖದೀಮರು. ಹಾಗಾಗಿ ರೈತರ ಜಮೀನಿನಲ್ಲಿರುವ ಅಡಿಕೆಯನ್ನ ರಾತ್ರೊ ರಾತ್ರಿ ಕದ್ದು ಮಾರಾಟಮಾಡುವ ದಂದೆ ಇತ್ತೀಚೆಗೆ ಹೆಚ್ಚಾಗಿದೆ.

ಕಾರಣ ಅಡಿಕೆಗೆ ಇದೀಗ ಚಿನ್ನದ ಬೆಲೆ ಬಂದಿದೆ, ಹಾಗಾಗಿ ಅಡಿಕೆ ಬೆಳೆಗಾರರು ಕಣ್ಣಿಗೆ ಎಣ್ಣಿಬಿಟ್ಟುಕೊಂಡು ತಮ್ಮ ಅಡಿಕೆ ಬೆಳೆಯನ್ನ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ದಾವಣಗೇರಿ ಜಿಲ್ಲೆಯಲ್ಲಿ ಇಂತಾ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ರೈತ ವರ್ಷಗಟ್ಟಲೆ ಕಷ್ಟ ಪಟ್ಟು ಸಾಲ ಸೂಲ ಮಾಡಿ ಅಡಿಕೆ ಬೆಳೆದರೆ, ಹಸಿ ಹಸಿ ಅಡಿಕೆಯನ್ನೇ ರಾತ್ರೋ ರಾತ್ರಿ ಕದಿಯುವ ಖದೀಮರು ರೈತರ ಆದಾಯಕ್ಕೆ ಖನ್ನ ಹಾಕುತಿದ್ದಾರೆ.

ಇಂತಾ ಪ್ರಕರಣಗಳು ದಾವಣಗೇರಿ ಪೊಲೀಸರ ನಿದ್ದೆಗೆಡಿಸಿದ್ದು ಖದೀಮರಿಗೆ ಕಡಿವಾಣ ಹಾಕುವುದು ದಾವಣಗೇರಿ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ, ಹಾಗಾಗಿ ಅಡಿಕೆ ಖದೀಮರ ಹೆಡೆಮುರಿ ಕಟ್ಟಲು ಅಡಿಕೆ ಬೆಳೆಗಾರ ರೈತರ ಮತ್ತು ಅಡಿಕೆ ಖರೀದಿದಾರರ ಸಹಾಯ ಪಡೆಯಲು ಪೊಲೀಸ್ ಇಲಾಖೆ ಮುಂದಾಗಿದೆ.

ಹೌದು ದಾವಣಗೇರಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ನೇತೃತ್ವದ ತಂಡ ಇದೀಗ ಗ್ರಾಮೀಣ ಬಾಗಗಳಿಗೆ ಬೇಟಿ ನೀಡಿ ರೈತರು ತಮ್ಮ ಅಡಿಕೆ ಬೆಳೆ ಕಾಪಾಡಿಕೊಳ್ಳಲು ಏನೇನು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜಾಗೃತಿ ಮೂಡಿಸುವ‌ ಕೆಲಸಮಾಡುತ್ತಿದ್ದಾರೆ. ಇನ್ಸಪೆಕ್ಟರ್ ನಿಂಗನಗೌಡ ನೆಗಳೂರು ನೇತೃತ್ವದ ತಂಡ ರೈತರಿಗೆ ಕೆಲವು ಸಲಹೆ ಸೂಚನೆಗಳನ್ನ ನೀಡುತಿದ್ದು,

ಪ್ರತಿ ದಿನ ರಾತ್ರಿ ಸರದಿ ಸಾಲಿನಂತೆ ರೈತರು ಕೈಯಲ್ಲಿ ಬೆಳಕು, ಬಡಿಗೆ ಹಿಡಿದು ತಮ್ಮ ಜಮೀನುಗಳಿಗೆ ಕಾವಲು ಕಾಯಬೇಕು, ಒಂದು ವೇಳೆ ಅಡಿಕೆ ಕಳ್ಳರ ಸುಳಿವು ಕಂಡು ಬಂದ ತಕ್ಷಣ 112ಗೆ ಕರೆಮಾಡಿದರೆ ಆ ಕ್ಷಣಕ್ಕೆ ಪೊಲೀಸರು ನಿಮ್ಮ ನೆರವಿಗೆ ದಾವಿಸುತ್ತಾರೆ, ಒಟ್ಟಿಗೆ ಜಮೀನು ಇರುವ ಹತ್ತಾರು ರೈತರು ಈರೀತಿಯಾಗಿ ಮಾಡಿದ್ದಲ್ಲಿ ಕಳ್ಳರ ನಿಯಂತ್ರಣ ಮಾಡಬಹುದು ನಿಮ್ಮ ಸಂಪತ್ತನ್ನ ರಕ್ಷಿಸಿಕೊಳ್ಳಬಹುದು ಅದರ ಜೊತೆ ಪೊಲೀಸ್ ಇಲಾಖೆಗೂ ನೀವು ಸಹಾಯಸ್ತ ಚಾಚಿದಂತಾಗುತ್ತದೆ ಎಂದು ಜನ ಸಾಮಾನ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅದೇರೀತಿಯಾಗಿ ಕದ್ದ ಹಸಿ ಅಡಿಕೆಯನ್ನ ಮಾರುಕಟ್ಟೆಯಲ್ಲಿ‌ ಮಾರಾಟ ಮಾಡಲು ಬಂದಂತ ಖದೀಮರ ಪತ್ತೆ ಹಚ್ಚಲು ಅಡಿಕೆ ಖರೀದಿದಾರರು ಕೂಡ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕೆಂದು ಸೂಚನೆ ನೀಡಿದ್ದಾರೆ,ಈ ಹಿನ್ನೆಲೆಯಲ್ಲಿ ಅಡಿಕೆ ಖರೀದಿದಾರರಿಗೂ ಕಟ್ಟು ನಿಟ್ಟಿನ ಆದೇಶ ಹೊರಡಿಸಿ ನಿಯಮ ಪಾಲಿಸಲು ಸೂಚಿಸಿದ್ದಾರೆ. ಅಡಿಕೆ ಮಾರಾಟ ಮಾಡಲು ಯಾವುದೇ ವ್ಯಕ್ತಿ ಮಾರುಕಟ್ಟೆಗೆ ಬಂದರೆ ಅಂತಾ ವ್ಯಕ್ತಿಯ ಆಧಾರ, ವಿಳಾಸ ಪಡೆಯಬೇಕು, ಹಾಗೇ ಮಾರುಕಟ್ಟೆಗೆ ಅಡಿಕೆ ತಂದ ವಾಹನದ ನಂಬರನ್ನ ಸಹ ತಮ್ಮ ಅಂಗಡಿಯ ರಿಜಿಸ್ಟರ್ ನಲ್ಲಿ ನಮೂದು‌ಮಾಡಿಕೊಂಡು ಅಡಿಕೆ ಖರೀದಿಸಬೇಕೆಂದು ಸೂಚಿಸಿದ್ದಾರೆ.

ಅದರ ಜೊತೆಗೆ ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಕ್ಯಾಮರ ಅಳವಡಿಸಿ ಅಡಿಕೆಮಾಡಿ ಕಳ್ಳರ ಚಲನ ವಲನಗಳ ಮೇಲೆ ನಿಗಾ ಇಡಲು ಮುಂದಾಗಿದ್ದಾರೆ, ಅದಕ್ಕಾಗಿ ಕೆಲವು ಗ್ರಾಮ ಪಂಚಾಯ್ತಿಗಳಿಗೆ ಕೂಡ ಸಿ.ಸಿ.ಕ್ಯಾಮರ ಅಳವಡಿಕೆ ಮಾಡಲು ಸೂಚನೆ ನೀಡಿದ್ದಾರೆ. ಸದ್ಯಕ್ಕೆ ದಾವಣಗೇರಿ ಜಿಲ್ಲೆಯಲ್ಲಿ ಅಡಿಕೆ ಕಳ್ಳತನ ಮತ್ತು ಅದರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಪಣ ತೊಟ್ಟು ನಿಂತಿದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.