![](https://hampimirror.com/media/2022/02/IMG_20220211_092711-1024x553.jpg)
![](https://hampimirror.com/media/2022/02/IMG_20220211_092752.jpg)
ಬಾಗಲಕೋಟೆ…ರಾಜ್ಯದಲ್ಲಿ ತೀವ್ರ ಸಂಚಲನ ಹಾಗೂ ಕುತೂಹಲ ಮೂಡಿಸಿರುವ ಪಂಚಮಸಾಲಿ ಸಮಾಜದ 3ನೇ ಪೀಠ ಸ್ಥಾಪನೆಗೆ ಫೆಬ್ರುವರಿ 13 ರಂದು ಮುಹೂರ್ತ ಫಿಕ್ಸ್ ಆಗಿದೆ. ಕೊರೊನಾ ನಿಯಮಗಳು ಸಡಿಲಿಕೆ ಆಗಿದ್ದರಿಂದ ಪೀಠಾರೋಹಣ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ನೆರವೇರಿಸಲು ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟ ಟೊಂಕ ಕಟ್ಟಿ ನಿಂತಿದೆ, ಈ ಸಂಭಂದ ಪೀಠಾರೋಹಣಕ್ಕಾಗಿ ಸ್ವಾಮೀಜಿಗಳಿಂದ ಬಸವಜೋಳಿಗೆ ದಾಸೋಹ ಸಂಗ್ರಹ ಅಭಿಯಾನ ಪ್ರಾರಂಭವಾಗಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಅಲಗೂರು ಗ್ರಾಮದ ಬಳಿ.ರಾಜ್ಯದ ಅತ್ಯಂತ ದೊಡ್ಡ ಸಮುದಾಯಗಳಲ್ಲಿ ಒಂದಾಗಿರುವ ವೀರಶೈವ ಲಿಂಗಾಯತ ಪಂಚಮಸಾಲಿ 3ನೇ ಪೀಠ ಸ್ಥಾಪನೆ ಇದೇ ಫೆಬ್ರವರಿ 13 ರಂದು ಆಗಲಿದೆ, ಈಗಾಗಲೇ ಒಕ್ಕೂಟದಿಂದ ಖರೀದಿ ಮಾಡಿರುವ ಜಮೀನಿನಲ್ಲೆ ಪೀಠಾರೋಹಣ ಕಾರ್ಯಕ್ರಮ ನಡೆಯುವುದರಿಂದ ಆ ಜಾಗವನ್ನು ಕಳೆದ ಒಂದು ತಿಂಗಳಿಂದ ಸಂಪೂರ್ಣ ಸ್ವಚ್ಚಗೊಳಿಸುವ ಕಾರ್ಯ ಮುಕ್ತಾಯವಾಗಿದೆ. ಇದೀಗ ಪೀಠಾರೋಹಣ ಕಾರ್ಯಕ್ರಮಕ್ಕೆ ಶಾಮಿಯಾನ ಹಾಕುವ ಕಾರ್ಯವೂ ಭರದಿಂದ ನಡೆದಿದ್ದು ಪೀಠಾರೋಹಣ ಕಾರ್ಯಕ್ರಮವನ್ನು ಐತಿಹಾಸಿಕಗೊಳಿಸುವ ನಿಟ್ಟಿನಲ್ಲಿ ವಿವಿಧ ಸಮುದಾಯಗಳ ಮಠಾಧೀಶರು, ಮುಖಂಡರು, ಸಮಾಜ ಬಾಂಧವರಿಗೂ ಸಹ ಆಮಂತ್ರಣ ನೀಡಲಾಗಿದೆ.
ಇನ್ನು 3ನೇ ಪೀಠದ ಸ್ಥಾಪನೆ ಬಗ್ಗೆ ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ, ಹರಿಹರ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಸಂಪೂರ್ಣ ಬೆಂಬಲ ಸೂಚಿಸಿ ಪೀಠಾರೋಹಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಇಷ್ಟು ದಿನ ಪರೋಕ್ಷವಾಗಿ ಮೂರನೇ ಪೀಠದ ಹಿಂದೆ ಇದ್ದ ಸಚಿವ ಮುರುಗೇಶ್ ನಿರಾಣಿ ಅವರ ಕುಟುಂಬ ಇದೀಗ ನೇರವಾಗಿ ಅಖಾಡಕ್ಕೆ ಇಳಿದಿದೆ.
![](https://hampimirror.com/media/2022/02/IMG_20220211_093006-1024x587.jpg)
ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿ 3ನೇ ಪೀಠ ಸ್ಥಾಪನೆಯ ಸಿದ್ದತಾ ಕಾರ್ಯದಲ್ಲಿ ನೇರವಾಗಿ ಬಾಗಿಯಾಗಿದ್ದಾರೆ,ನೆನ್ನೆ ಅಲಗೂರು ಗ್ರಾಮದ ಬಳಿ ನಿರ್ಮಾಣ ಆಗುತ್ತಿರುವ ವೇದಿಕೆಯನ್ನು ಪರಿಶೀಲನೆ ಮಾಡಿದ ಸಂಗಮೇಶ್ ನಿರಾಣಿ, ಸಮಾಜದ ಅಭಿವೃದ್ಧಿ ಉದ್ದೇಶದಿಂದ ಪಂಚಮಸಾಲಿ ಸಮಾಜದ ೮೪ ಜನ ಸ್ವಾಮೀಜಿಗಳು ಒಕ್ಕೂಟ ಮಾಡಿಕೊಂಡು ಮೂರನೇ ಪೀಠ ರಚನೆ ಮಾಡುತ್ತಿದ್ದಾರೆ.ಆ ಹಿನ್ನೆಲೆ ಪೀಠಕ್ಕೆ ನಾವು ಬೆಂಬಲ ನೀಡುತ್ತಿದ್ದೇವೆ. ಇದರಲ್ಲಿ ಸಚಿವ ಮುರುಗೇಶ್ ನಿರಾಣಿ ಅವರ ಸ್ವಾರ್ಥವಿಲ್ಲ ಮಠಾಧೀರು, ಮಠಗಳನ್ನು ಬಳಸಿಕೊಂಡು ನಿರಾಣಿ ಅವರು ಬೆಳೆದಿಲ್ಲ. ಅವರು ಜನಸಾಮಾನ್ಯರ ,ಮತದಾರರ ರೈತರ ಆಶೀರ್ವಾದದಿಂದ ಬೆಳೆದಿದ್ದಾರೆ ಎಂದು ಶಾಸಕ ಯತ್ನಾಳ್ ಹಾಗೂ ಕೂಡಲ ಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳಿಗ ತಿರುಗೇಟು ನೀಡಿದ್ದಾರೆ.
![](https://hampimirror.com/media/2022/02/IMG_20220211_093050-1024x559.jpg)
![](https://hampimirror.com/media/2022/02/IMG_20220211_092906.jpg)
ಇನ್ನು ಪಂಚಮಸಾಲಿ ಸಮುದಾಯದ ಮೂರನೆ ಪೀಠದ ಪೀಠಕ್ಕೆ ಪೀಠಾಧಿಕಾರಿಯಾಗಿ ವಿಜಯಪುರ ಜಿಲ್ಲೆ ಬಬಲೇಶ್ವರ ಬೃಹನ್ಮಠದ ಪೂಜ್ಯ ಮಹದೇವ ಶಿವಾಚಾರ್ಯ ಸ್ವಾಮೀಜಿ ಅವರ ಪೀಠಾರೋಹಣ ನೆರವೇರಲಿದೆ. ಫೆಬ್ರವರಿ 13 ರಂದು ಬೆಳಗಿನ ಜಾವ 4.20 ಗಂಟೆಗೆ ಬ್ರಾಹ್ಮಿ ಮುಹೂತ್ವದಲ್ಲಿ ಪಟ್ಟಾಭಿಷೇಕ ವಿಧಿ ವಿಧಾನಗಳು ನಡೆಯಲಿವೆ. 11 ಜನ ವೈದಿಕರ ಸಮ್ಮುಖದಲ್ಲಿ ನಡೆಯಲಿದೆ.ಪೀಠಾರೋಹಣ ಕಾರ್ಯಕ್ರಮವನ್ನು ಕೇವಲ ಪಂಚಮಸಾಲಿ ಸಮಾಜಕ್ಕೆ ಮಾತ್ರ ಸೀಮಿತಗೊಳಿಸದೇ ಸರ್ವ ಸಮಾಜದವರಿಗೆ ಹಾಗೂ ವಿವಿಧ ಮಠಾಧೀಶರಿಗೂ ಆಮಂತ್ರಣ ನೀಡಿದ್ದಾರೆ.
ಎಲ್ಲ ಸಮುದಾಯಗಳನ್ನು ಕರೆದುಕೊಂಡು ಸಮಾಜ ಅಭಿವೃದ್ದಿಗಾಗಿ ಈ ನೂತನ ಪೀಠ ಎಂದು ಒಕ್ಕೂಟದ ಸ್ವಾಮೀಜಿಗಳು ಹೇಳುತ್ತಾರೆ. ಇನ್ನು ಮುಖ್ಯವಾಗಿ ಪಂಚಮಸಾಲಿ ಸಮಾಜಕ್ಕೆ ಒಕ್ಕಲುತನವೇ ಪ್ರಧಾನ ಕಾಯಕ ಆಗಿದ್ದರಿಂದ ಪೀಠಾರೋಹಣ ಕಾರ್ಯಕ್ರಮದ ದಿನ ರೈತ ವಿರಾಟ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಜೊತೆಗೆ ಸಮಾವೇಶಕ್ಕೆ ಸ್ವಾಮೀಜಿಗಳು ಪಣ ತೊಟ್ಟು ನಿಂತಿದ್ದು ಕಾರ್ಯಕ್ರಮಕ್ಕಾಗಿ ಬಸವಜೋಳಿಗೆ ದಾಸೋಹ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ. ನಿನ್ನೆ ಜಮಖಂಡಿ ನಗರದ ಮನೆ ಮನೆಗೆ ಜೋಳಿಗೆ ಮೂಲಕ ತೆರಳಿದ ಸ್ವಾಮೀಜಿಗಳು ದಾನ್ಯ ಸಂಗ್ರಹ ಮಾಡಿದರು.ಕೇವಲ ಪಂಚಮಸಾಲಿ ಸಮುದಾಯದ ಜನರಷ್ಟೇ ಅಲ್ಲಸೆ ಜೈನ,ಗಾಣಿಗ,ಕುರುಬ,ಮುಸ್ಲಿಂ,ಸೇರಿಂದ ವಿವಿಧ ಸಮುದಾಯದ ಜನರು ಸ್ವಾಮೀಜಿಗಳಿಗೆ ದವಸದಾನ್ಯ ನೀಡಿದರು.
ಒಟ್ಟಾರೆಯಾಗಿ ಆಲಗೂರ ಗ್ರಾಮದಲ್ಲಿ ಒಕ್ಕೂಟದ ಜಾಗೆಯಲ್ಲಿ ಫೆಬ್ರವರಿ. 13 ರಂದು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆ, ನೂತನ ಪೀಠಾಧಿಪತಿಗಳ ಪಟ್ಟಾಧಿಕಾರ ಹಾಗೂ ರೈತ ವಿರಾಟ ಸಮಾಜವೇಶಕ್ಕೆ ವೇದಿಕೆ ಸಜ್ಜಾಗುತ್ತಿದೆ. ಅಂದಾಜು ಒಂದು ಲಕ್ಷಕ್ಕೂ ಅಧಿಕ ಭಕ್ತರನ್ನು ಸೇರಿಸಿ, ಕಾರ್ಯಕ್ರಮ ಯಶಸ್ವಿಗೊಳಿಸುವ ಪ್ಲ್ಯಾನ್ ಮಾಡಿಕೊಂಡಿದ್ದು, ಅದಕ್ಕೆ ಎಲ್ಲಾ ತಯಾರಿಯನ್ನು ಒಕ್ಕೂಟದ ಸ್ವಾಮೀಜಿಗಳು ಹಾಗೂ ಸಂಘಟಿಕರು ನಡೆಸಿದ್ದು ಎಲ್ಲರ ಚಿತ್ತ ಪೆಬ್ರುವರಿ 13ರ ಮೇಲಿದೆ.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್. ವಿಜಯನಗರ.