ವಿಜಯನಗರ…ಡಿಎಂಎಫ್ ಯೋಜನೆ ಅಡಿಯಲ್ಲಿ ಹೊಸಪೇಟೆ ನಗರದಲ್ಲಿ ವಿಜಯನಗರ ಜಿಲ್ಲಾಡಳಿತ ಕಚೇರಿಗಾಗಿ ಗುರುತಿಸಲಾದ ಟಿಎಸ್ಪಿಯ ನೆಲಮಹಡಿ ಹಾಗೂ ಮೊದಲ ಮಹಡಿ ನವೀಕರಣಗೊಂಡ ಕಟ್ಟಡವನ್ನು ಪ್ರವಾಸೋದ್ಯಮ, ಪರಿಸರ,ಜೀವಿಶಾಸ್ತ್ರ ಸಚಿವ ಆನಂದಸಿಂಗ್ ಅವರು ಬುಧವಾರ ಉದ್ಘಾಟಿಸಿದರು,ವಿಜಯನಗರ ಜಿಲ್ಲೆಯಾಗಿ ಅಧಿಕೃತವಾಗಿ ಆರಂಭಗೊಂಡ ನಂತರ ಅಮರವಾತಿ ಅತಿಥಿಗೃಹದಲ್ಲಿ ಜಿಲ್ಲಾಧಿಕಾರಿ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿಯಲ್ಲಿ ಜಿಪಂ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಇನ್ಮುಂದೆ ಜಿಲ್ಲಾಧಿಕಾರಿ ಕಚೇರಿ,ಜಿಪಂ ಕಚೇರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿವೆ. ಇವುಗಳ ಜೊತೆಗೆ ಇನ್ನೂ ಕೆಲ ಕಚೇರಿಗಳು ಕಾರ್ಯನಿರ್ವಹಿಸಲಿವೆ.
06ಕೋಟಿ ರೂ.ವೆಚ್ಚದಲ್ಲಿ ಈ ಟಿಎಸ್ಪಿಎಲ್ ಕಟ್ಟಡ ನವೀಕರಣಗೊಳಿಸಲಾಗಿದೆ.ಮೊದಲು ಗಣರಾಜ್ಯೋತ್ಸವ ಪೂರ್ವ ಪೀಠಿಕೆಯ ಫಲಕ ಅನಾವರಣ .ನಂತರ ವಿಜಯನಗರ ಜಿಲ್ಲಾ ಉಭಯ ಕಚೇರಿಗಳ ನಾಮಫಲಕಗಳನ್ನು ಸಚಿವ ಆನಂದಸಿಂಗ್ ಅವರು ಅನಾವರಣಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಿಂಗ್ ಅವರು ವಿಜಯನಗರ ಜಿಲ್ಲೆಯ ಅಭಿವೃದ್ಧಿಗಾಗಿ 500ಕೋಟಿ ರೂ.ಗಳನ್ನು ಬರುವ ಬಜೆಟ್ ನಲ್ಲಿ ನೀಡುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.
ವಿಜಯನಗರ ಜಿಲ್ಲೆಯನ್ನು ವೇಗವಾಗಿ ಅಭಿವೃದ್ಧಿಪಡಿಸಬೇಕೆಂಬ ಮಹಾದಾಸೆ ನಮ್ಮದು;ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಸೇರಿದಂತೆ
ಅತ್ಯಂತ ವೇಗವಾಗಿ ಕೆಲಸನಿರ್ವಹಿಸುವ ಯುವ ಅಧಿಕಾರಿಗಳ ತಂಡವೇ ಇಲ್ಲಿದೆ ಎಂದರು.
ಒಂದು ಜಿಲ್ಲೆ ರಚನೆಯಾಗಬೇಕಾದರೇ ದೂರದೃಷ್ಟಿ, ನಾಯಕತ್ವ ಗುಣ ಅಗತ್ಯ ಎಂದು ಪ್ರತಿಪಾದಿಸಿ ಸಚಿವ ಸಿಂಗ್ ಅವರು ವಿಜಯನಗರ ಜಿಲ್ಲೆ ಘೋಷಣೆಯ ಮೂಲಕ ನಮ್ಮ ಸರಕಾರ ಪಶ್ಚಿಮ ತಾಲೂಕುಗಳ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದೆ ಎಂದರು.
ಈ ಜಿಲ್ಲೆ ಅಧಿಕೃತವಾಗಿ ರಚನೆಯಾಗುವುದಕ್ಕಿಂತ ಮುಂಚೆಯೇ ವೇಗವಾಗಿ ಕೆಲಸ ಮಾಡುವ ಅನಿರುದ್ಧ ಶ್ರವಣ್ ಅವರನ್ನು ವಿಶೇಷಾಧಿಕಾರಿಗಳನ್ನಾಗಿ ನೇಮಿಸಲಾಯಿತು;ಅವರು ಚಿಕ್ಕಬಳ್ಳಾಪುರ ಮತ್ತು ಬೀದರ್ ಜಿಲ್ಲೆಯಲ್ಲಿ ಸಲ್ಲಿಸಿದ ಸೇವಾನುಭವ ಈ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಇಡೀ ಜಗತ್ತಿನಲ್ಲಿಯೇ ಮೆಚ್ಚುಗೆ ಪಡೆದ ಸಂವಿಧಾನ ನಮ್ಮದು;ವೈವಿಧ್ಯತೆಯಲ್ಲಿ ಏಕತೆಯಾಗಿಸಿಕೊಂಡು ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ ಎಂದು ಹೇಳಿದ ಸಚಿವ ಸಿಂಗ್ ಅವರು ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಮಾತನಾಡಿ, ಡಿ.18ರಂದು 12 ಇಲಾಖೆಗಳ ಕಚೇರಿ ಸ್ಥಾಪನೆಗೆ ಸರಕಾರ ಅನುಮೋದನೆ ನೀಡಿದ್ದು,ಎಲ್ಲ ಕಚೇರಿಗಳ ಕಾರ್ಯಾರಂಭ ಮಾಡಿವೆ;ಇನ್ನೊಂದು ತಿಂಗಳಲ್ಲಿ ಅಧಿಕಾರಿಗಳು ಬರಲಿದ್ದಾರೆ. ಹಂತಹಂತವಾಗಿ ಎಲ್ಲ ಕಚೇರಿಗಳು ಬರಲಿವೆ ಎಂದರು.
ನೂತನ ಜಿಲ್ಲೆಯ ಸ್ಥಾಪನೆಯ ಸಂದರ್ಭದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಸರಕಾರ 50.18ಕೋಟಿ ರೂ.ಗಳನ್ನು ನೀಡಿದ್ದು,ಅದರಡಿ 05 ಇನ್ನೋವಾ ವಾಹನಗಳು ಮತ್ತು 06ಬೊಲೆರೋ ವಾಹನಗಳು ಖರೀದಿಸಲಾಗಿದ್ದು,ಸಚಿವರು ಲೋಕಾರ್ಪಣೆ ಮಾಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ್, ಎಸ್ಪಿ ಡಾ.ಅರುಣ್ ಕೆ, ಜಿಪಂ ಸಿಇಓ ಹರ್ಷಲ್ ಬೋಯರ್, ಎಡಿಸಿ ಮಹೇಶ್ ಬಾಬು, ಎಸಿ ಸಿದ್ದರಾಮೇಶ್ವರ, ಡಿವೈಎಸ್ಪಿ ವಿಶ್ವನಾಥ್ ಕುಲಕರ್ಣಿ,ತಹಸೀಲ್ದಾರ್ ವಿಶ್ವನಾಥ, ತಾಪಂ ಇಒ ವಿಶ್ವನಾಥ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಿಶೋರಬಾಬು ಸೇರಿದಂತೆ ಅನೇಕರು ಇದ್ದರು.
*ಪ್ರವಾಸೋದ್ಯಮ ಇಲಾಖೆಯ ಕ್ಯಾಲೆಂಡರ್ ಗಳ ಬಿಡುಗಡೆ: ವಿಜಯನಗರ ಸ್ಮಾರಕಗಳಿಗೆ ಸಂಬಂಧಿಸಿದಂತೆ ಹಾಗೂ ಅಳಿವಿನಂಚಿನಲ್ಲಿರುವ ವನ್ಯಜೀವಿಗಳ ಪರಿಚಯಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯು ವಿಜಯನಗರ ಜಿಲ್ಲಾಡಳಿತ ಜತೆಗೂಡಿ ಹೊರತಂದ ಕ್ಯಾಲೆಂಡರ್ ಗಳನ್ನು ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಅವರು ಬಿಡುಗಡೆ ಮಾಡಿದರು.
ಸ್ಕೇಟಿಂಗ್ ರಿಂಕ್ ಉದ್ಘಾಟಿಸಿದ ಸಚಿವ ಆನಂದಸಿಂಗ್
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಒಳಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಸ್ಕೇಟಿಂಗ್ ರಿಂಕ್ ಅನ್ನು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದಸಿಂಗ್ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸ್ಕೇಟಿಂಗ್ ತರಬೇತಿಗೆ ಆಗಮಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಶುಭಾಷಯ ಕೋರಿದರು ಮತ್ತು ಅವರ ಸ್ಕೇಟಿಂಗ್ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಎಂಸಿಎಚ್ ಆಸ್ಪತ್ರೆ ಆವರಣದಲ್ಲಿ 800 ಎಲ್ಪಿಎಂ ಸಾಮರ್ಥ್ಯದ ಆಕ್ಸಿಜನ್ ಸಂಗ್ರಹಣಾ ಘಟಕ ಉದ್ಘಾಟನೆ
ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ 800ಎಲ್ಪಿಎಂ ಸಾಮರ್ಥ್ಯದ ಆಕ್ಸಿಜನ್ ಸಂಗ್ರಹಣಾ ಘಟಕವನ್ನು ಪ್ರವಾಸೋದ್ಯಮ, ಪರಿಸರ,ಜೀವಿಶಾಸ್ತ್ರ ಸಚಿವ ಆನಂದಸಿಂಗ್ ಅವರು ಬುಧವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ನಗರಸಭೆಯ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ್, ಎಸ್ಪಿ ಡಾ.ಅರುಣ್ ಕೆ, ಜಿಪಂ ಸಿಇಓ ಹರ್ಷಲ್ ಬೋಯರ್, ಎಡಿಸಿ ಮಹೇಶ್ ಬಾಬು, ಎಸಿ ಸಿದ್ದರಾಮೇಶ್ವರ, ಡಿಎಚ್ಒ ಡಾ.ಜನಾರ್ಧನ್,ಡಿವೈಎಸ್ಪಿ ವಿಶ್ವನಾಥ್ ಕುಲಕರ್ಣಿ,ತಹಸೀಲ್ದಾರ್ ವಿಶ್ವನಾಥ, ತಾಪಂ ಇಒ ವಿಶ್ವನಾಥ ಸೇರಿದಂತೆ ಅನೇಕರು ಇದ್ದರು.
ವೀಡಿಯೊ ವೀಕ್ಷಣೆಮಾಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ವಿಜಯನಗರ.