You are currently viewing 70ವರ್ಷಗಳಿಗೂ ಹೆಚ್ಚುಕಾಲ ಹಳೆಯದಾದ ತುಂಗಭದ್ರಾ ಜಲಾಶಯದ ಎರಡನೇ ಎಚ್ಚರಿಕೆ ಗಂಟೆ ಇದು.

70ವರ್ಷಗಳಿಗೂ ಹೆಚ್ಚುಕಾಲ ಹಳೆಯದಾದ ತುಂಗಭದ್ರಾ ಜಲಾಶಯದ ಎರಡನೇ ಎಚ್ಚರಿಕೆ ಗಂಟೆ ಇದು.

ವಿಜಯನಗರ (ಹೊಸಪೇಟೆ )ಕಳೆದ ಐದು ವರ್ಷಗಳಲ್ಲಿ ಎರಡನೇ ಎಚ್ಚರಿಕೆ ಗಂಟೆ ಬಾರಿಸಿದ ತುಂಗಭದ್ರಾ ಜಲಾಶಯ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಮತ್ತೊಂದು ಅವಘಡ ಸಂಭವಿಸಬಹುದೇ..? ಹೌದು ನಿನ್ನೆ ರಾತ್ರಿ ತುಂಗಭದ್ರಾ ಜಲಾಶಯದ ಕ್ರಸ್ಟ್  ಗೇಟ್ ನಂಬರ್19 ರ ಚೈನ್ ತುಂಡಾಗಿ ಗೇಟ್ ನೀರಿನಲ್ಲಿ ಕಳಚಿ ಬಿದ್ದಿದೆ, ಇದರ ಪರಿಣಾಮ ಜಲಾಶಯದಲ್ಲಿ ಸಂಗ್ರಹವಾಗಿದ್ದ ಭಾರಿ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿದೆ.



ತುಂಡಾಗಿರುವ ಕ್ರಸ್ಟ್ ಗೇಟ್ ದುರಸ್ತಿ ಮಾಡಬೇಕಾದರೆ ಜಲಾಶಯದಲ್ಲಿ  ಸಂಗ್ರಹವಾಗಿರುವ ನೀರನ್ನು ಒಂದು ಹಂತದವರೆಗೆ ಖಾಲಿ ಮಾಡಲೇಬೇಕಾದ ಅನಿವಾರ್ಯತೆ ಇದೀಗ ಬಂದೋದಾಗಿದೆ. ಹಾಗಾಗಿ ಇಂದು ಬೆಳಗಿನಿಂದ ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್ ಗಳನ್ನ ತೆರೆದು ಬಾರಿ ಪ್ರಮಾಣದ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಜಲಾಶಯದಿಂದ ಹೀಗೆ ನೀರು ಹರಿಬಿಡುತ್ತಿರುವುದರಿಂದ  ಪ್ರವಾಹ ಪರಿಸ್ಥಿತಿ ಎದುರಾಗದೆ ಇದ್ದರೂ ಮುಂದೆ ಕ್ಷಾಮದ ಭೀತಿ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.



ಕಾರಣ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೆ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾಗುವ ಸಾಧ್ಯತೆ ಇರುತ್ತೆ ಅನ್ನೋದು ಈ ಭಾಗದ  ಜನಸಾಮಾನ್ಯರ ಆತಂಕ. ವಿಜಯನಗರ ಬಳ್ಳಾರಿ, ಕೊಪ್ಪಳ ರಾಯಚೂರು ಹಾಗೂ ಆಂಧ್ರ ಪ್ರದೇಶದ ಎರಡು ಜಿಲ್ಲೆಗಳಿಗೆ ನೀರುಣಿಸುವ ಈ ತುಂಗಭದ್ರಾ ಜಲಾಶಯ ಈ ಭಾಗದ  ಎಲ್ಲಾ ಅವಲಂಬಿತ ಜನ ಜಾನುವಾರುಗಳಿಗೆ ವರದಾನವೇ ಸರಿ.



ಹಾಗಾಗಿ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿಗೆ ಇನ್ನು ಎಷ್ಟು ಪ್ರಮಾಣದ ನೀರು ನದಿ ಸೇರಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಜಲಾಶಯ ಬರ್ತೀಯಾದಗ ಸಂಭವಿಸುವ ಅವಘಡ ಇದೆ ಮೊದಲೇನಲ್ಲ. ಕಳೆದ ನಾಲ್ಕು ವರ್ಷಗಳ ಹಿಂದೆ ತುಂಗಭದ್ರಾ ಜಲಾಶಯದ ಕೊಪ್ಪಳ ಜಿಲ್ಲೆಯಲ್ಲಿರುವ ಮುನಿರಾಬಾದ್ ಬಳಿಯಲ್ಲಿ ಸ್ಥಳೀಯ ಕಾಲುವಿಗೆ ನೀರು ಹರಿಸುವ ಕ್ರಸ್ಟ್ ಗೇಟ್ ನೀರಿನ ರವಸಕ್ಕೆ ಮುರಿದು ಹೋಗಿತ್ತು, ಇದರ ಪರಿಣಾಮ ಮುಂಭಾಗದಲ್ಲಿರುವ ಪಂಪಾವನ ಸೇರಿದಂತೆ ಈ ಭಾಗದಲ್ಲಿ ಬಹುತೇಕ ಪ್ರದೇಶ ಜಲಾವೃತಗೊಂಡಿತು.



ಮೂರರಿಂದ ನಾಲ್ಕು ಅಡಿ ಉದ್ದಗಲದ ಈ ಕ್ರಸ್ಟ್ ಗೇಟ್ ಸರಿಪಡಿಸಲು ತಂತ್ರಜ್ಞರು ಹಗಲಿರುಳು ಶ್ರಮ ವಹಿಸಿದ್ದರು. ಸುಮಾರು ಒಂದು ವಾರಗಳ ಕಾಲ ನಿರಂತರ ಪರಿಶ್ರಮದ ಫಲವಾಗಿ  ನಿರಂತರವಾಗಿ ಹರಿಯುತ್ತಿದ್ದ ನೀರನ್ನು ತಡೆಯುವಲ್ಲಿ ಅಧಿಕಾರಿಗಳು ಮತ್ತು ತಂತ್ರಜ್ಞರು ಯಶಸ್ವಿಯಾಗಿದ್ದರು. ಅದಾದ ಬಳಿಕ ಇದೀಗ ಕ್ರಸ್ಟ್ ಗೇಟ್ 19ರ ಚೈನ್ ತುಂಡಾಗಿ ಅವಗಡ ಸಂಭವಿಸಿದೆ.



ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ  ಜಲಾಶಯಕ್ಕೆ ಅಳವಡಿಸಿರುವ  ಕಬ್ಬಿಣದ ಸಲಕರಣೆಗಳು ತಮ್ಮ ಸತ್ವವನ್ನು ಕಳೆದುಕೊಂಡಿವೆಯಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಹೌದು ಏಳು ದಶಕಗಳ ಹಿಂದೆ ನಿರ್ಮಾಣವಾಗಿರುವ ಈ ಜಲಾಶಯಕ್ಕೆ ಆಗಿನ ಕಾಲದ ಕಬ್ಬಿಣದ ಕ್ರಸ್ಟ್ ಗೇಟ್ ಗಳನ್ನ ಅಳವಡಿಕೆ ಮಾಡಲಾಗಿದ್ದು ಇಲ್ಲಿಯವರೆಗೆ ತಮ್ಮ ಶಕ್ತಿಯನ್ನ ಉಳಿಸಿಕೊಂಡು ಬಂದಿವೆ, ಆದರೆ ಇನ್ನುಮುಂದೆ ಅದು ಸಾಧ್ಯವಿಲ್ಲ ಎನ್ನುವ ಎಚ್ಚರಿಕೆಯನ್ನ ಜಲಾಶಯ ನೀಡುತ್ತಿದೆ ಎನ್ನುವಂತಿದೆ.



ಹಾಗಾಗಿ ಜನಪ್ರತಿನಿಧಿಗಳು ಮತ್ತು ಟಿಬಿ ಬೋರ್ಡ್ ನ ಅಧಿಕಾರಿಗಳು ಜಲಾಶಯಕ್ಕೆ ಈ ಹಿಂದೆ ಅಳವಡಿಕೆ ಮಾಡಲಾಗಿದ್ದ ಕಬ್ಬಿಣದ ಸಲಕರಣೆಗಳನ್ನು ಪ್ರತಿ ವರ್ಷ ತಪಾಸಣೆಗೆ ಒಳಪಡಿಸುವುದು ಅಷ್ಟೇ ಅಲ್ಲದೆ ಸಾಧ್ಯವಾದರೆ ಅವುಗಳನ್ನ ನವೀಕರಣ ಮಾಡಲೇ ಬೇಕಾಗಿದೆ. ಇಲ್ಲವಾದರೆ ಇಂದು ಸಂಭವಿಸಿರುವ ಅವಘಡ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸಂಭವಿಸಿದರೂ  ಆಶ್ಚರ್ಯ ಪಡಬೇಕಾಗಿಲ್ಲ.
ಹಂಪಿ ಮಿರರ್ ಸುಭಾನಿ ಪಿಂಜಾರ ಹೊಸಪೇಟೆ.