You are currently viewing ಕನಿಕರ ಇಲ್ಲದ ನರೇಗ ಉದ್ಯೋಗ ಖಾತರಿ, ನೀರು, ನೆರಳು ಇಲ್ಲದ ಕಾಮಗಾರಿ, ಬಡವರಿಗೆ ಆಗಿದೆ ಹೊರೆ.

ಕನಿಕರ ಇಲ್ಲದ ನರೇಗ ಉದ್ಯೋಗ ಖಾತರಿ, ನೀರು, ನೆರಳು ಇಲ್ಲದ ಕಾಮಗಾರಿ, ಬಡವರಿಗೆ ಆಗಿದೆ ಹೊರೆ.

ವಿಜಯನಗರ.. ಹೌದು ಬೇಸಿಗೆ ಬಿಸಿಲಿನಿಂದ ಕಾರ್ಮಿಕರನ್ನ ರಕ್ಷಣೆಮಾಡುವ ಸಂಭಂದ ನರೇಗದಲ್ಲಿ ಕೆಲಸಮಾಡುವ ಕೂಲಿ ಕಾರ್ಮಿಕರ ಕೆಲಸದ ಹೊರೆಯನ್ನ ಶೇಖಡ 30%ರಷ್ಟು ಕಡಿತ ಗೊಳಿಸಿರುವುದಾಗಿ ಸರ್ಕಾರ ಹೇಳುತ್ತದೆ, ಆದರೆ ಸರ್ಕಾರ ಬದಲಾವಣೆಮಾಡಿರುವ ಈ ನಿಯಮ ಎಲ್ಲ ಕಡೆಗಳಲ್ಲೂ ಅಪ್ಡೇಟ್ ಆಗಿಲ್ಲ, ಅದರ ಪರಿಣಾಮ ಕಾರ್ಮಿಕರು ಬಿರು ಬಿಸಿಲಿನಲ್ಲೇ ಹೆಚ್ಚಿನ ಕೆಲಸಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಹೌದು ಇಂತದ್ದೊಂದು ದುಸ್ಥಿತಿ ಕಂಡುಬಂದಿದ್ದು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಹಿರೇಕೊಳಚಿ ಗ್ರಾಮದಲ್ಲಿ. ಹಗರನೂರು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ  ನಡೆಯುತ್ತಿರುವ ನರೇಗ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹಿರೇಕೊಳಚಿ ಒಂದೇ ಗ್ರಾಮದಲ್ಲಿ ಸರಿ ಸುಮಾರು ಎರಡು ನೂರಕ್ಕು ಹೆಚ್ಚು ಕಾರ್ಮಿಕರು ಕಳೆದ ಒಂದು ವಾರದಿಂದ ಕೆಲಸಮಾಡುತಿದ್ದಾರೆ.

ಹೀಗೆ ಕೆಲಸಮಾಡುವ ಪ್ರತಿಯೊಬ್ಬ ಕಾರ್ಮಿಕ ಐದು ಅಡಿ ಉದ್ದಗಲ ಮತ್ತು ಎರಡು ಅಡಿಯಷ್ಟು ಆಳದ ಮಣ್ಣನ್ನ ಕಡಿದು ಬದುವಿಗೆ ಹಾಕುತಿದ್ದಾರೆ. ಆದರೆ ಬೇಸಿಗೆ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣಕ್ಕೆ ಕಾರ್ಮಿಕರು ಮಾಡುವ ಈ ಕೆಲಸದ ಪ್ರಮಾಣದಲ್ಲಿ ಶೇಖಡ 30%ರಷ್ಟು ಕಡಿಮೆಮಾಡಬೇಕೆನ್ನುವುದು ಸರ್ಕಾರದ ನಿಯಮವಾಗಿದೆ. ಆದರೆ ಸರ್ಕಾರ ಈ ರೀತಿಯ ನಿಯಮ ಜಾರಿಗೆ ತಂದರು ಇಲ್ಲಿನ ಹಗರನೂರು ಗ್ರಾಮಪಂಚಾಯ್ತಿ ಪಿಡಿಒ. ಮಾತ್ರ ಇಲ್ಲಿನ ಕಾರ್ಮಿಕರಿಗೆ ಆ ನಿಯಮ ತಲುಪಿಸಿಲ್ಲ.

ಇನ್ನು ಈ ವಿಷಯವನ್ನ ನಿಲ್ಲಿನ ತಾಲೂಕು ಪಂಚಾಯ್ತಿ ಇ.ಒ. ಅವರ ಗಮನಕ್ಕೆ ತಂದು ಆಗಿರುವ ವಂಚನೆಯ ಕುರಿತು ತಿಳಿಸಿದಾಗ, ಸರ್ಕಾರ ನಿಯಮ ಜಾರಿಗೆ ತಂದಿರುವುದು ನಿಜ, ಇದರ ಲಾಭವನ್ನು ಕಾರ್ಮಿಕರಿಗೆ ತಲುಪಿಸುವ ಕೆಲಸವನ್ನ ಪಿ.ಡಿ.ಒ. ಮಾಡಬೇಕು, ಬೇಸಿಗೆ ಬಿಸಿಲಿನ ಕಾರಣ ಈಗ ಮಾಡುವ ಕೆಲಸದ ಪ್ರಮಾಣದಲ್ಲಿ ಶೇಖಡ 30% ಕಡಿಮೆ ಮಾಡಬೇಕು, ಅಂದರೆ ನಾಲ್ಕು ಅಡಿಯಷ್ಟು ಉದ್ದಗಲ ಮತ್ತು ಎರಡು ಅಡಿಯಷ್ಟು ಆಳದ ಮಣ್ಣನ್ನ ಮಾತ್ರ ಕಾರ್ಮಿಕರು ಕಡಿದು ಬದುವಿಗೆ ಹಾಕಬೇಕು ಎಂದು ಸ್ಪಷ್ಟನೆ ನೀಡಿದರು.

ಹೌದು ಗ್ರಾಮೀಣ ಬಾಗದ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಬೇರೆಡೆ ವಲಸೆ ಹೋಗವುದನ್ನ ತಡೆಯುವ ಸಂಭಂದ ನರೇಗ ಯೋಜನೆ ಪ್ರಾರಂಭಿಸಿ ಬಡತನ ನಿರ್ಮೂಲನೆ ಮಾಡುವ ಪ್ರಯತ್ನಗಳನ್ನ ಸರ್ಕಾರ ಮಾಡುತ್ತಿದೆ. ಆದರೆ ಸರ್ಕಾರ ಜಾರಿಗೆ ತಂದ ಈ ಯೋಜನೆಯ ಲಾಭವನ್ನ ಬಡ ಕಾರ್ಮಿಕರು ಎಷ್ಟರ ಮಟ್ಟಿಗೆ ಪಡೆಯುತ್ತಾರೆ, ಅಧಿಕಾರಿಗಳು ಎಷ್ಟರ ಮಟ್ಟಿಗೆ ಕಾರ್ಮಿಕರಿಗೆ ಈ ಯೋಜನೆ ತಲುಪಿಸುವ ಪ್ರಯತ್ನಮಾಡುತಿದ್ದಾರೆ ಎಂದು ರಿಯಾಲಿಟಿ ಚಕ್ ಮಾಡಿದ ಸಂದರ್ಭದಲ್ಲಿ ನಮಗೆ ಕಂಡ ವಾಸ್ತವ ಪರಿಸ್ಥಿತಿ ಇದು.

ಹೌದು ನರೇಗ ಯೋಜನೆಯ ಬಗ್ಗೆ ಸರ್ಕಾರ ಹೇಳುವುದು ಒಂದು ಅಧಿಕಾರಿಗಳು ಮಾಡುವುದು ಇನ್ನೊಂದು. ಇದರಿಂದ ಬಡ ಕೂಲಿ ಕಾರ್ಮಿಕರು ಮಾತ್ರ ಹೆಣ ಬಾರ ಹೋರುವುದು ತಪ್ಪಿಲ್ಲ. ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾದ ಕಾರಣ ನೆರೇಗ ಯೋಜನೆ ಅಡಿ ಕೆಲಸಮಾಡುವ ಕಾರ್ಮಿಕರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಕೆಲಸದ ನಿಯಮಗಳಲ್ಲಿ ಬದಲಾವಣೆ ಮಾಡಿರುವುದಾಗಿ ಸರ್ಕಾರ ಹೇಳುತ್ತೆ, ಆದರೆ ಸರ್ಕಾರ ಮಾಡಿರುವ ಬದಲಾವಣೆಯ ನಿಯಮಗಳು ಮಾತ್ರ ಬಡ ಕಾರ್ಮಿಕರಿಗೆ ತಲುಪುತ್ತಿಲ್ಲ, ಅದರ ಪರಿಣಾಮ ಕಾರ್ಮಿಕರು ಒಂದು ರೀತಿಯ ಜೀತದ ಆಳಿನ ರೀತಿಯಲ್ಲಿ ಕೆಲಸಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಹೀಗೆ ಕೆಲಸ ಮಾಡುವ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಏನೆಲ್ಲ ಸವಲತ್ತುಗಳು ಇರಬೇಕು ಎಂದು ನೋಡುವುದಾದರೆ, ಕುಡಿಯುವ ನೀರು, ವೃದ್ದರು, ಮಕ್ಕಳು ಕುಳಿತುಕೊಳ್ಳಲು ನೆರಳಿನ ವ್ಯವಸ್ಥೆ, ಅದರ ಜೊತೆಗೆ ತುರ್ತು ಔಷದಗಳು ಇರಬೇಕೆನ್ನುವುದು ಸರ್ಕಾರ ಮಾಡಿರುವ ಖಡ್ಡಾಯ ನಿಯಮ ಇದು. ಆದರೆ ಈ ನಿಯಮಗಳು ಹೇಳಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿವೆ, ಇದರಲ್ಲಿನ ಯಾವೊಂದು ಸವಲತ್ತುಗಳು ಇಲ್ಲಿ ಕಾರ್ಮಿಕರಿಗೆ ಇಲ್ಲದೆ ಕೆಲಸಮಾಡಬೇಕಾದ ಅನಿವಾರ್ಯತೆ ಇದೆ.

ತಮ್ಮ ಹಸುಗೂಸುಗಳನ್ನ ಕರೆದುಕೊಂಡು ಬಂದ ಕಾರ್ಮಿಕರು ಬಿರುಬಿಸಿಲಿನಲ್ಲೇ ಮಕ್ಕಳನ್ನ ಬಿಟ್ಟು ಕೆಲಸಮಾಡುತ್ತಿರುವ ದೃಷ್ಯಗಳನ್ನ ನೋಡಿದರೆ ಎಂತವರ ಕರುಳು ಕಿತ್ತುಬರುವಂತಿತ್ತು, ಇಂತಾ ಮಕ್ಕಳಿಗೆ ನೆರಳುಮಾಡಬೇಕಾದ ಅಧಿಕಾರಿಗಳು ಕಿಂಚಿತ್ತೂ ಕನಿಕರ ತೋರದೆ ಕಾರ್ಮಿಕರನ್ನ ದುಡಿಸಿಕೊಳ್ಳುತ್ತಾರೆ. ಇನ್ನು ಕಾರ್ಮಿಕರಿಗೆ ಕುಡಿಯುವ ನೀರನ್ನ ಕೊಡುವ ಸಂಭಂದ ಸಾವಿರಾರು ರೂಪಾಯಿ ಹಣ ಖರ್ಚುಮಾಡಿ ನೀರು ತುಂಬುವ ಕಾಲಿ ಕ್ಯಾನ್ ಖರೀದಿಸಿದೆ ಎಂದು ಹೇಳುವ ಅಧಿಕಾರಿಗಳು, ಖರೀದಿಸಿರುವ ಕಾಲಿ ಕ್ಯಾನ್ ಗಳನ್ನ ಇಲ್ಲಿ ಕೆಲಸಮಾಡುವ ಕಾರ್ಮಿಕರಿಗೆ ತಲುಪಿಸಲು ನಾನ್ಯಾಕೆ, ನೀನ್ಯಾಕೆ ಎಂದು ಮೀನಾಮೇಶ ಎಣಿಸುವ‌ ಮೂಲಕ ನಿರ್ಲಕ್ಷ ತೋರುತಿದ್ದಾರೆ. ಇನ್ನು ತುರ್ತು ಔಷಧಿಯ ವ್ಯವಸ್ಥೆ ಅಂತೂ ಕೇಳುವ ಹಾಗಿಲ್ಲ. ಇಷ್ಟೆಲ್ಲ ಸಮಸ್ಯೆಗಳನ್ನ ಕಾರ್ಮಿಕರು ವಾಸ್ತವದಲ್ಲಿ ಎದುರಿಸುತಿದ್ದರೂ ಹೊರ ಜಗತ್ತಿಗೆ ಕಾಣುವುದು ಮಾತ್ರ ಈ ಎಲ್ಲ ಸೌಕರ್ಯಗಳನ್ನ ಕಾರ್ಮಿಕರಿಗೆ ಕೊಡುತಿದ್ದೇವೆ ಎನ್ನುವ ಸುದ್ದಿಗಳನ್ನ.

ಇನ್ನು ಈ ಹಿಂದೆ ಮಾಡುತಿದ್ದ ಕೆಲಸದ ಅವದಿಗೂ ಈ ವರ್ಷ ಮಾಡುವ ಕೆಲಸದ ಅವದಿಗೂ ಅಜಗಜಾಂತರ ವ್ಯತ್ಯಾಸ.

ಹೌದು ಈ ಹಿಂದೆ ಬೆಳಗಿನ ಜಾವ ಏಳುಗಂಟೆ ಸುಮಾರಿಗೆ ಕೆಲಸಕ್ಕೆ ಹಾಜರಾಗುತಿದ್ದ ಕಾರ್ಮಿಕರು ತಮಗೆ ಕೊಟ್ಟ ಸೀಮಿತ ಕೆಲಸವನ್ನ ಆದಷ್ಟು ಬೇಗ ಮುಗಿಸಿಕೊಂಡು ಮನೆ ಸೇರುತಿದ್ದರು. ಆದರೆ ಈ ವರ್ಷ ಹಾಗಿಲ್ಲ, ಬೆಳಗ್ಗೆ ಒಂಭತ್ತು ಗಂಟೆ ಸುಮಾರಿಗೆ ಕೆಲಸಕ್ಕೆ ಹಾಜರಾಗಿ ಖಡ್ಡಾಯವಾಗಿ ಎಂಟು ಗಂಟೆ ಸಮಯ ಕೆಲಸದ ಸ್ಥಳದಲ್ಲಿ ಇರಲೇ ಬೇಕು. ಈ ಎಂಟು ಗಂಟೆ ಸಮಯದಲ್ಲಿ ಯಾವ ಸಂದರ್ಭದಲ್ಲಾದರೂ ದಿನಕ್ಕೆ ಎರಡು ಬಾರಿ ಜಿ.ಪಿ.ಎಸ್. ಮಾಡಿ ಕಾರ್ಮಿಕರ ಹಾಜರಾತಿ ಪಡೆಯಲಾಗುತ್ತೆ. ಒಂದು ವೇಳೆ ಕಾರ್ಮಿಕರು ಈ ಸಂದರ್ಭದಲ್ಲಿ ಗೈರು ಹಾಜರಿ ಇದ್ದರೆ ಆ ದಿನ ಕೆಲಸ ಮಾಡಿದ್ದೂ ವ್ಯರ್ಥವಾಗುತ್ತೆ.

ಇನ್ನು ಇಷ್ಟೆಲ್ಲ ನಿಯಮಗಳು ಕಠಿಣವಾಗಿದ್ದು, ಕೂಲಿ ಕಾರ್ಮಿಕರಿಗೆ ಈ ವರ್ಷ ಇಪ್ಪತ್ತು ರೂಪಾಯಿ ಕೂಲಿ ಹೆಚ್ಚು ಮಾಡಿದ್ದಕ್ಕೆ. ಹೌದು ಕಳೆದ ವರ್ಷದ ವರೆಗೆ 289ರೂಪಾಯಿ ಕೂಲಿ ಕೊಡುತಿದ್ದ ಸರ್ಕಾರ, ಈ ವರ್ಷ ಇಪ್ಪತ್ತು ರೂಪಾಯಿ ಕೂಲಿ ಹೆಚ್ಚುಮಾಡಿದೆ. ಅಂದರೆ 309ರೂಪಾಯಿ ಕೂಲಿಯನ್ನ ಈ ವರ್ಷದ ಮಾರ್ಚ್ ತಿಂಗಳಿನಿಂದ ಜಾರಿಗೆ ತಂದಿರುವ ಸರ್ಕಾರ ಎಲ್ಲಾ ಕಠಿಣ ನಿಯಮಗಳನ್ನ ಜಾರಿಗೆ ತಂದು ಬಡವರು ಕೂಲಿ ಮಾಡಲು ಹಿಂಜರಿಯುವಂತೆ ಮಾಡಿದೆ. ಇನ್ನು ಸರ್ಕಾರ ಇಷ್ಟೊಂದು ಕಠಿಣ ನಿಯಮಗಳನ್ನ ಪಾಲನೆ ಮಾಡಿಯೂ ಕೆಲಸಮಾಡಿದ ಕಾರ್ಮಿಕರಿಗೆ ಕೊನೆಗೆ ಎದುರಾಗುವುದು ಸರ್ವರ್ ಪ್ರಾಬ್ಲಮ್.

ಹೌದು ಇನ್ನೇನು ಕೆಲಸ ಮುಗಿತು ನೆಮ್ಮದಿಯಿಂದ ಮನೆಗೆ ತೆರಳೊಣ ಎಂದು ಕಾರ್ಮಿಕರು ಮನೆಗೆ ಮರಳುವ ಹಾಗಿಲ್ಲ. ಮನೆಗೆ ಮರಳು ಸಂರ್ಭದಲ್ಲಿ ಹಾಜರಾತಿ ಹಾಕಲೇಬೇಕು, ಹಾಜರಾತಿ ಹಾಕಲು ಸರ್ವರ್ ಇರಲೇಬೇಕು. ಈ ಸರ್ವರ್ ಇಲ್ಲದೆ ಹೋದರೆ ಮನೆಗೆ ಮರಳುವುದು ಕಷ್ಟ, ಸರ್ವರ್ ಬರುವ ವರೆಗೆ ಕಾದು ಕುಳಿತು ಹಾಜರಾತಿ ಕೊಟ್ಟು ನಂತರ ಮನೆಗೆ ಮರಳಬೇಕು. ಒಂದು ವೇಳೆ ಹಾಗೆ ಮರಳಿದರೆ ಅಂದು ದುಡಿದ ಕೂಲಿಯ ಹಣ ಕೈ ಸೇರುವುದು ಕಷ್ಟವಾಗಿದೆ ಈ ಕೂಲಿ ಕಾರ್ಮಿಕರಿಗೆ.

ಇನ್ನು ಈ ಎಲ್ಲಾ ಸಮಸ್ಯಗಳನ್ನ ಇಟ್ಟುಕೊಂಡ ಗ್ರಾಕೋಸ್ ಸಂಘಟನೆ ಹೂವಿನ ಹಡಗಲಿ ತಾಲೂಕು ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಅಧಿಕಾರಿಗಳ ಗಮನ ಸೆಳೆಯುವಲ್ಲೇನು ಯಶಸ್ವಿಯಾಗಿತ್ತು. ಸಂಘಟನೆಗೆ ಭರವಸೆ ನೀಡದ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯಗಳಿಗೆ ಅಂತ್ಯ ಹಾಡುವುದಾಗಿ ಸಮಾದಾನಮಾಡಿ ಕಳಿಸಿದ್ದರು, ಆದರೆ ಅದರ ಮಾರನೆ ದಿನವೇ ರಿಯಾಲಿಟಿ ಚಕ್ ಮಾಡಿದಾಗ ಯಾವ ಸಮಸ್ಯೆಗಳು ಬಗೆ ಹರಿದಿಲ್ಲ, ಕಾರ್ಮಿಕರ ಗೋಳು ಮಾತ್ರ ತಪ್ಪಿಲ್ಲ, ಇದೇ ರೀತಿ ಮುಂದುವರೆದರೆ ನಮ್ಮ ಕಷ್ಟುಗಳು ದೂರವಾಗುವುದು ಯಾವಾಗ ಎನ್ನುವುದು ಕಾರ್ಮಿಕರ ಪ್ರಶ್ನೆಯಾಗಿದೆ‌.

ವೀಡಿಯೊ ನೋಡಲು ಕೆಳಗಿನ ಲಿಂಕ್ ಒತ್ತಿರಿ

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.