You are currently viewing ಹಂಪಿ ಉತ್ಸವ ಜ.27,28,29ರಂದು ಆಚರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ: ಸಚಿವೆ ಶಶಿಕಲಾ ಅಣ್ಣ ಸಾಹೇಬ್ ಜೊಲ್ಲೆ

ಹಂಪಿ ಉತ್ಸವ ಜ.27,28,29ರಂದು ಆಚರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ: ಸಚಿವೆ ಶಶಿಕಲಾ ಅಣ್ಣ ಸಾಹೇಬ್ ಜೊಲ್ಲೆ


ವಿಜಯನಗರ(ಹೊಸಪೇಟೆ) 2023ರ ಜನವರಿ ತಿಂಗಳಾಂತ್ಯಕ್ಕೆ ಮೂರು ದಿನಗಳ ಕಾಲ ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತವಾರಿ ಸಚಿವರಾದ ಶಶಿಕಲಾ ಅಣ್ಣ ಸಾಹೇಬ್ ಜೊಲ್ಲೆ ಅವರು ತಿಳಿಸಿದರು.
ಅವರು ಸೋಮವಾರದಂದು ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಹಂಪಿ ಉತ್ಸವ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಈ ಮೊದಲು 2023 ರ ಜನವರಿ ತಿಂಗಳ 7 ಮತ್ತು 8 ರಂದು ಎರಡು ದಿನಗಳ ಕಾಲ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಅದೇ ಸಮಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ಕಾರ್ಯಕ್ರಮವನ್ನು ಜನವರಿ ತಿಂಗಳಾಂತ್ಯಕ್ಕೆ ಮುಂದೂಡಿ ಜನವರಿ 27, 28 ಮತ್ತು 29 ರಂದು ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಸಲು ದಿನಾಂಕವನ್ನು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ. ಆದರೆ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಅದ್ದೂರಿ ಆಚರಣೆ: ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಕಳೆದ ಎರಡು ವರ್ಷಗಳಿಂದ ಹಂಪಿ ಉತ್ಸವವನ್ನು ಆಯೋಜಿಸಲಾಗಿರಲಿಲ್ಲ. ಹೀಗಾಗಿ ಈ ಬಾರಿ ಕಳೆದ ಎಲ್ಲಾ ಹಂಪಿ ಉತ್ಸವಗಳಿಗಿಂತಲೂ ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ. ಮೂರು ದಿನಗಳ ಕಾಲ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಸಾರುವಂತಹ ಧ್ವನಿ ಬೆಳಕಿನ ಕಾರ್ಯಕ್ರಮವು ಇದರಲ್ಲಿ ಇರಲಿದೆ. ವಿಜಯನಗರ ಗತ ವೈಭವವನ್ನು ಮರುಸೃಷ್ಟಿಸುವ ರೀತಿಯಲ್ಲಿ ಉತ್ಸವ ಆಯೋಜಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
3 ವೇದಿಕೆ: ಹಂಪಿಯ ಗಾಯಿತ್ರಿ ಪೀಠದ ಹತ್ತಿರ ಮೊದಲ ವೇದಿಕೆಯನ್ನು ನಂತರ ಎರಡನೇ ವೇದಿಕೆಯನ್ನು ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಎದುರು ಬಸವಣ್ಣನ ಹತ್ತಿರ ನಿರ್ಮಾಣ ಮಾಡಲು ತಿರ್ಮಾನಿಸಲಾಗಿದ್ದು, ಮತ್ತೊಂದು ವೇದಿಕೆಯನ್ನು ಜಾಗದ ಲಭ್ಯತೆಯನ್ನು ಆಧರಿಸಿ ತೀರ್ಮಾನ ಮಾಡಲಾಗುತ್ತದೆ ಎಂದರು.
ಉತ್ಸವ ಆಚರಣೆಗೆ ಅನುದಾನ: ಈಗಾಗಲೇ 2021-22 ನೇ ಸಾಲಿನ ಹಂಪಿ ಉತ್ಸವ ಆಚರಣೆಯ ಸಲುವಾಗಿ ಕನ್ನಡ ಸಂಸ್ಕøತಿ ಇಲಾಖೆಯಿಂದ 4.10 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿರುತ್ತದೆ. ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದ್ದು, 6 ಕೋಟಿ ರೂಪಾಯಿಗಳ ಅನುದಾನ ನೀಡುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ. ಅಗತ್ಯ ಅನುದಾನವನ್ನು ನೀಡುವಂತೆ ಈಗಾಗಲೇ ಸರಕಾರದ ವಿವಿಧ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ಇದಲ್ಲದೆ ಖಾಸಗಿ ಕಂಪನಿಗಳ ಸಿಎಸ್‍ಆರ್ ನಿಧಿಯನ್ನು ನೀಡುವಂತೆ ಕೋರಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಹುಡಾ ಅಧ್ಯಕ್ಷ ಅಶೋಕ್ ಜೀರೆ, ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಟಿ.ವಿ.ಪ್ರಕಾಶ್, ಸಹಾಯಕ ಆಯುಕ್ತ ಸಿದ್ರಾಮೇಶ್ವರ, ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗಣ್ಣನವರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
-*-
*ಜಿಲ್ಲಾ ಅಭಿವೃದ್ದಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ*
ಮಹಿಳೆಯರಿಗೆ ಆರ್ಥಿಕ ನೆರವಾಗುವ ಕಾರ್ಯಕ್ರಮ ಹಾಕಿಕೊಳ್ಳಲು ಸಂಸದ ವೈ.ದೇವೇಂದ್ರಪ್ಪ ಸೂಚನೆ
ಹೊಸಪೇಟೆ(ವಿಜಯನಗರ)ಡಿ.05(ಕರ್ನಾಟಕ ವಾರ್ತೆ): ರಾಷ್ಟ್ರೀಯ ಗ್ರಾಮೀಣ ಲಲ್ವಿಹುಡ್ ಮಿಷನ್ ಯೋಜನೆಯಡಿ ಖಾತರಿ ಯೋಜನೆಯಡಿ ಆರ್ಥಿಕವಾಗಿ ನೆರವಾಗುವ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಜೆ.ಜೆ.ಎಂ ನಲ್ಲಿಯು ಇದಕ್ಕೆ ಅವಕಾಶ ಕಲ್ಪಿಸಿರುವುದು ಆಶಾದಾಯಕ ಬೆಳೆವಣಿಗೆಯಾಗಿದೆ ಎಂದು ಸಂಸದರಾದ ವೈ.ದೇವೇಂದ್ರಪ್ಪ ತಿಳಿಸಿದರು.
ಅವರು ಸೋಮವಾರ ವಿಜಯನಗರ ಕ್ರೀಡಾ ಇಲಾಖೆ ಒಳಾಂಗಣ ಸಭಾಂಗಣದಲ್ಲಿ ಏರ್ಪಡಿಸಲಾದ ದಿಶಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ತಿಳಿಸಿದರು. ಜಿಲ್ಲೆಯಲ್ಲಿ ಮನೆ ಮನೆಗೂ ನಲ್ಲಿ ನೀರನ್ನು ಪೂರೈಕೆ ಮಾಡಲು ಜಲ ಜೀವನ್ ಮಿಷನ್ ಯೋಜನೆಯಡಿ ಸಾಕಷ್ಟು ಕಾಮಗಾರಿಗಳು ನಡೆಯುತ್ತಿದ್ದು ಇಲ್ಲಿ ಕಾಮಗಾರಿಗಳಿಗೆ ಅಳವಡಿಸುವ ನಾಮಫಲಕಗಳನ್ನು ಹಾಕಲು ಮಹಿಳಾ ಸ್ವ ಸಹಾಯ ಗುಂಪುಗಳಿಂದ ತಯಾರಿಸಲಾದ ಸ್ಟ್ಯಾಂಡ್ ಪೋಸ್ಟ್ ಖರೀದಿಗೆ ಉದ್ದೇಶಿಸಿ ತಯಾರಿಕೆಗೆ ಮಹಿಳೆಯರಿಗೆ ತರಬೇತಿ ನೀಡಿ ಸ್ಟ್ಯಾಂಡ್ ಸಿದ್ದಪಡಿಸಿರುವುದು ಮಹಿಳೆಯರ ಆರ್ಥಿಕಾಭಿವೃದ್ದಿಗೆ ಪೂರಕವಾಗಿದೆ ಎಂದರು. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣ್ ರಾವ್ ಅವರು ಉತ್ತಗಿಯಲ್ಲಿ 160 ಮತ್ತು ಮೈಲಾರದಲ್ಲಿ 190 ಸ್ಟ್ಯಾಂಡ್‍ಗಳನ್ನು ತಯಾರಿಸಲಾಗಿದೆ ಎಂದು ಈ ವೇಳೆ ಪ್ರಸ್ತಾಪಿಸಿದರು.
ಯೋಜನಾ ವಿಭಾಗದ ಇಂಜಿನಿಯರ್‍ಗೆ ನೋಟಿಸ್; ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಭೆಗೆ ಯಾವುದೇ ಅನುಮತಿ ಪಡೆಯದೇ ಗೈರಾಗಿದ್ದು ಕಚೇರಿ ತಾಂತ್ರಿಕ ಸಹಾಯಕರನ್ನು ಕಳುಹಿಸಲಾಗಿದೆ. ಸಭೆಗೆ ಮಾಹಿತಿ ನೀಡಲು ಸಹ ಇವರು ವಿಫಲವಾಗಿದ್ದು ಯಾವುದೇ ಪೂರ್ವಾನುಮತಿ ಪಡೆಯದೇ ಗೈರಾಗಿರುವ ಕಾರ್ಯಪಾಲಕ ಇಂಜಿನಿಯರ್‍ಗೆ ನೋಟಿಸ್ ನೀಡಲು ಸಿಇಓ ಗೆ ಸೂಚನೆ ನೀಡಿದರು. ಪಿಎಂಜಿಎಸ್‍ವೈ ಯೋಜನೆಯಡಿ ನಿರ್ಮಾಣ ಮಾಡಲಾದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ ಎಂದು ಸಾಕಷ್ಟು ದೂರುಗಳಿದ್ದು ಇದಕ್ಕೆ ಯೋಜನಾ ವಿಭಾಗದ ಇಂಜಿನಿಯರ್ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಮಾಹಿತಿ ಇದ್ದ ಕಾರಣ ಸಭೆಗೆ ಗೈರಾಗಿದ್ದಾರೆ ಎಂದು ಸಂಸದರು ತಮ್ಮ ಅಸಮಧಾನ ವ್ಯಕ್ತಪಡಿಸಿದರು.
ಅಂಗನವಾಡಿ ಕಟ್ಟಡಗಳು ಅಪೂರ್ಣ; ವಿವಿಧ ಯೋಜನೆಯಡಿ ಅನುದಾನವನ್ನು ನೀಡಿದ್ದರೂ ಸಹ ಅಂಗನವಾಡಿ ಕಟ್ಟಡಗಳನ್ನು 2016 ರಿಂದ ನಿರ್ಮಾಣ ಮಾಡದೆ ಬಾಕಿ ಉಳಿಸಿಕೊಳ್ಳಲಾಗಿದೆ. ಒಟ್ಟು 115 ಅಂಗನವಾಡಿಗಳ ನಿರ್ಮಾಣಕ್ಕಾಗಿ 16 ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ 10.35 ಕೋಟಿ ವೆಚ್ಚ ಮಾಡಿ 88 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಇನ್ನೂ 19 ಕಾಮಗಾರಿಗಳು ಪ್ರಗತಿಯಲ್ಲಿದ್ದು 8 ಕಾಮಗಾರಿಗಳು ಆರಂಭವಾಗಿರುವುದಿಲ್ಲ. ಅಧಿಕಾರಿಗಳು ಜಾಗದ ಸಮಸ್ಯೆ ಇದ್ದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಹಣ ನೀಡಿದರೂ ಕೆಲಸ ಮಾಡಲ್ಲವೆಂದರೇ ಹೇಗೆ ಎಂದು ಕೆಆರ್‍ಡಿಎಲ್ ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ತಿಳಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ ಜಿಲ್ಲೆಗೆ ಕೆಕೆಆರ್‍ಡಿಬಿ, ಡಿಎಂಎಫ್ ಸೇರಿದಂತೆ ಇಲಾಖೆ ಅನುದಾನಗಳು ಬರಲಿದ್ದು ಇದಕ್ಕೆ ಆಯಾ ಇಲಾಖೆಗಳು ಅಸೆಟ್ ಮಾನಿಟೈಜೇಷನ್ ಮಾಡಿಕೊಳ್ಳಬೇಕೆಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನರ ಸ್ವ ಉದ್ಯೋಗಕ್ಕೆ ಸಾಲ, ಸೌಲಭ್ಯಕ್ಕೆ ಕೊಡಿಸಿ; ಜನರಿಗೆ ವಿವಿಧ ಅಭಿವೃದ್ದಿ ನಿಗಮಗಳಿಂದ ಸ್ವ ಉದ್ಯೋಗಕ್ಕಾಗಿ ಸಾಲ, ಸೌಲಭ್ಯವನ್ನು ನೇರವಾಗಿ ಹಾಗೂ ಬ್ಯಾಂಕ್ ಮೂಲಕ ಸಾಲವನ್ನು ನೀಡಲಾಗುತ್ತಿದ್ದು ಯಾವ ಬ್ಯಾಂಕ್‍ಗಳಲ್ಲಿ ಸಾಲ ನೀಡುವುದಿಲ್ಲವೋ ಅಂತಹ ಬ್ಯಾಂಕ್ ಮ್ಯಾನೇಜರ್‍ಗೆ ಮಾಹಿತಿ ನೀಡಿ ಸಾಲ ಕೊಡಿಸಲು ಕಾಲ ಕಾಲಕ್ಕೆ ಲೀಡ್ ಬ್ಯಾಂಕ್ ಸಭೆಯನ್ನು ನಡೆಸಬೇಕೆಂದು ಸೂಚನೆ ನೀಡಿದರು. ಈ ವೇಳೆ ಲೀಡ್ ಬ್ಯಾಂಕ್ ಮ್ಯಾನೇಜರ್ ಸಭೆಗೆ ಕೆಲವೇ ಕೆಲವು ಇಲಾಖೆ ಅಧಿಕಾರಿಗಳು ಬರುತ್ತಾರೆ. ಸಭೆಗೆ ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಬಂದಲ್ಲಿ ಸಮಸ್ಯೆಗಳನ್ನು ನೇರವಾಗಿ ಆಯಾ ಬ್ಯಾಂಕ್‍ಗಳ ಮ್ಯಾನೇಜರ್ ಜೊತೆ ಚರ್ಚಿಸಿ ಇತ್ಯರ್ಥ ಮಾಡಲು ಅನುಕೂಲವಾಗುತ್ತದೆ ಎಂದಾಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಬ್ಯಾಂಕರ್ಸ್‍ಗಳ ಸಭೆಯನ್ನು ನಡೆಸಿ ಕ್ರಮ ಕೈಗೊಳ್ಳಲು ಸಂಸದರು ತಿಳಿಸಿದರು.
ಖಾತರಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ; ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ವಿಜಯನಗರ ಜಿಲ್ಲೆ ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿದೆ. ಮೊದಲ ಸ್ಥಾನ ಬಳ್ಳಾರಿಯಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ 66.30 ಲಕ್ಷ ಮಾನವ ದಿನಗಳ ಸೃಜನೆ ಗುರಿಯಲ್ಲಿ ಈಗಾಗಲೇ 53.47 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು 204.86 ಕೋಟಿ ಆರ್ಥಿಕ ಗುರಿಯಲ್ಲಿ ಬಿಡುಗಡೆಯಾದ 158.60 ಕೋಟಿಯಲ್ಲಿ 155.13 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಿಇಓ ಸಭೆಯಲ್ಲಿ ತಿಳಿಸಿದಾಗ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದರು. ಖಾತರಿಯಲ್ಲಿ ಸ್ವ ಉದ್ಯೋಗಕ್ಕಾಗಿ 136 ಕೋಳಿ ಶೆಡ್‍ಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಶ್ರೀಹರಿಬಾಬು, ದಿಶಾ ಸಮಿತಿ ಸದಸ್ಯೆ ಕುಸುಮ ಜಗದೀಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪಿಂಚಣಿ ಪಡೆಯುತ್ತಿರುವವರು ಸಮಗ್ರ ವಾರ್ಷಿಕ ಪರಿಶೀಲನೆ ಮಾಡಿಸಿ: ಹೊಸಪೇಟೆ ಗ್ರೇಡ್-2 ತಹಶೀಲ್ದಾರ್
ವಿಜಯನಗರ(ಹೊಸಪೇಟೆ)ಡಿ.05(ಕರ್ನಾಟಕ ವಾರ್ತೆ): ವೃದ್ಯಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ ಹಾಗೂ ಸಂಧ್ಯಾ ಸುರಕ್ಷ ವೇತನದಲ್ಲಿ ಮಾಸಿಕ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ತಮ್ಮ ಕಂದಾಯ ಇಲಾಖೆ ಸಿಬ್ಬಂದಿಯವರಲ್ಲಿ ಮೂಲ ಆಧಾರ, ಬ್ಯಾಂಕ್ ಪಾಸ್‍ಬುಕ್‍ನೊಂದಿಗೆ ಖುದ್ದಾಗಿ ಹಾಜರಾಗಿ ತಮ್ಮ ಪಿಂಚಣಿಯ ವಾರ್ಷಿಕ ಪರಿಶೀಲನೆ ಕಾರ್ಯದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಹೊಸಪೇಟೆ ಗ್ರೇಡ್-2 ತಹಶೀಲ್ದಾರ್ ಅವರು ತಿಳಿಸಿದ್ದಾರೆ.

ಹೊಸಪೇಟೆ ತಹಶೀಲ್ದಾರರ ಕಚೇರಿ, ಕಮಲಾಪುರ ನಾಡಕಚೇರಿ, ಮರಿಯಮ್ಮನಹಳ್ಳಿ ನಾಡಕಚೇರಿಗಳಿಗೆ ಪಿಂಚಣಿದಾರರು ಖುದ್ದಾಗಿ ಹೋಗಿ ವಾರ್ಷಿಕ ಪರಿಶೀಲನೆಯನ್ನು ಮಾಡಿಸಬೇಕು. ತಪ್ಪಿದಲ್ಲಿ ಪಿಂಚಣಿ ಯೋಜನೆಯಲ್ಲಿ ಆಸಕ್ತಿ ಇಲ್ಲವೆಂದು ಪರಿಗಣಿಸಿ ಡಿ.30ರ ನಂತರ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ತಾತ್ಕಾಲಿಕವಾಗಿ ಸ್ಥಗಿತಗೊಂಡ ಪ್ರಕರಗಳಲ್ಲಿ ಫಲಾನುಭವಿಗಳು ತಮ್ಮ ಅಧಾರ್ ಮತ್ತು ಬ್ಯಾಂಕ್/ಅಂಚೆ ಖಾತೆ ವಿವರಗಳನ್ನು ಸಲ್ಲಿಸಿದ ನಂತರ ಮರುಚಾಲನೆಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.