You are currently viewing ಗೊರುಚ,ಭಾಷ್ಯಂಸ್ವಾಮಿ,ವೆಂಕಟಾಚಲ ಶಾಸ್ತ್ರೀಗೆ ನಾಡೋಜ, ಪದ್ಮರಾಜ್ ದಂಡಾವತಿ, ಬಿ.ಎಸ್. ಪುಟ್ಟಸ್ವಾಮಿ, ಕಲ್ಕುಳಿ ವಿಠ್ಠಲ ಹೆಗಡೆ ಮುರುಘಾ ಶ್ರೀಗಳಿಗೆ ಡಿ.ಲಿಟ್

ಗೊರುಚ,ಭಾಷ್ಯಂಸ್ವಾಮಿ,ವೆಂಕಟಾಚಲ ಶಾಸ್ತ್ರೀಗೆ ನಾಡೋಜ, ಪದ್ಮರಾಜ್ ದಂಡಾವತಿ, ಬಿ.ಎಸ್. ಪುಟ್ಟಸ್ವಾಮಿ, ಕಲ್ಕುಳಿ ವಿಠ್ಠಲ ಹೆಗಡೆ ಮುರುಘಾ ಶ್ರೀಗಳಿಗೆ ಡಿ.ಲಿಟ್

ವಿಜಯನಗರ… ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರತಿಷ್ಠಿತ ನಾಡೋಜ ಗೌರವ ಪದವಿಗೆ ಗೊ.ರು.ಚನ್ನಬಸಪ್ಪ, ಡಾ. ಭಾಷ್ಯಂ ಸ್ವಾಮಿ, ಪ್ರೊ. ವೆಂಕಟಾಚಲ ಶಾಸ್ತ್ರೀ ಅವರು ಭಾಜನರಾಗಿದ್ದಾರೆ. ಇದೇ ತಿಂಗಳು ಏ.12ರಂದು ಸಂಜೆ 5:30ಕ್ಕೆ ವಿವಿಯ ನವರಂಗ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಥಾವರ್‍ಚಂದ್ ಗೆಹ್ಲೊಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ನಾಡೋಜ ಗೌರವ ಪದವಿ ಪ್ರದಾನ ಮಾಡಲಿದ್ದಾರೆ.

ಕನ್ನಡ ವಿಶ್ವವಿದ್ಯಾಲಯದ 30ನೇ ನುಡಿಹಬ್ಬ/ಘಟಿಕೋತ್ಸವದ ಕುರಿತು ವಿವಿಯ ಮಂಟಪ ಸಭಾಂಗಣದಲ್ಲಿ ಕುಲಪತಿ ಡಾ.ಸ.ಚಿ.ರಮೇಶ ಅವರು ವಿಶ್ವವಿದ್ಯಾಲಯದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಘಟಿಕೋತ್ಸವ ಭಾಷಣವನ್ನು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ತೇಜಸ್ವಿ ವಿ. ಕಟ್ಟಿಮನಿ ಅವರು ಮಾಡಲಿದ್ದಾರೆ.

ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿಗಳು ಹಾಗೂ ಪತ್ರಕರ್ತ ಪದ್ಮರಾಜ್ ದಂಡಾವತಿ, ಕೆಂಪೇಗೌಡ ಅಧ್ಯಾಯನ ಕೇಂದ್ರದ ಮುಖ್ಯಸ್ಥ ಬಿ.ಎಸ್.ಪುಟ್ಟಸ್ವಾಮಿ, ಪರಿಸರ ಹೋರಾಟಗಾರ ಕಲ್ಕುಳಿ ವಿಠ್ಠಲ ಹೆಗಡೆ ಇವರಿಗೆ ಡಿ.ಲಿಟ್ ಹಾಗೂ 1380 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಉನ್ನತ ಶಿಕ್ಷಣ, ಐಟಿ, ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಪ್ರದಾನ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಹಂಪಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ. ಹಾಗೂ ಕನ್ನಡ ವಿಶ್ವವಿದ್ಯಾಲಯದ ಡೀನ್ ಬಾಷಾ ನಿಕಾಯ ಪ್ರಾಧ್ಯಾಪಕ ಡಾ.ವೀರೇಶ ಬಡಿಗೇರ, ಡೀನ್ ಸಮಾಜವಿಜ್ಞಾನ ನಿಕಾಯ  ಪ್ರಾಧ್ಯಾಪಕ ಡಾ.ಸಿ.ಎಸ್.ವಾಸುದೇವನ್, ಡೀನ್ ವಿಜ್ಞಾನಗಳ ನಿಕಾಯ ಪ್ರಾಧ್ಯಾಪಕ ಡಾ.ಮಾಧವ ಪೆರಾಜೆ, ಪ್ರಸಾರಾಂಗ ನಿರ್ದೇಶಕಿ ಡಾ.ಶೈಲಜಾ ಇಂ.ಹಿರೇಮಠ, ಮಾಹಿತಿ ಕೇಂದ್ರದ ಉಪನಿರ್ದೇಶಕಿ ಡಾ.ಡಿ.ಮೀನಾಕ್ಷಿ ಹಾಗೂ ಹಿರಿಯ ಪ್ರಾಧ್ಯಾಪಕರು ಇದ್ದರು.

ವೀಡಿಯೊ ನೋಡಲು ಕೆಳಗಿನ ಲಿಂಕ್ ಒತ್ತಿರಿ.

ವರದಿ..ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.