ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯದಲ್ಲಿ ಈಜಲು ಹೋಗಿದ್ದು ಯುವಕರು ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ನಿರಂತರ ಮಳೆಯಿಂದಾಗಿ ಮಾಲವಿ ಜಲಾಶಯದಲ್ಲಿ ಸುಮಾರು 19 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಭಾನುವಾರ ಏಳು ಜನ ಗೆಳೆಯರು ಜಲಾಶಯದ ವೀಕ್ಷಣೆಗೆಂದು ಬಂದಿದ್ದರು ಎನ್ನಲಾಗಿದೆ.
ಅಲ್ಲಿಯೇ ಪಾರ್ಟಿ ಮಾಡಿ, ಬಳಿಕ ಜಲಾಶಯದಲ್ಲಿ ಈಜಲು ತೆರಳಿದ್ದಾರೆ, ಈಜು ಬರದ ಉಜ್ಜಿನಿಯ ಎಂ.ಆರ್.ಹಾಲೇಶ್ (34), ಕೊಟ್ಟೂರಿನ ಎಂ.ಚರಣರಾಜ್ (28) ಕಣ್ಮರೆಯಾಗಿರುವ ವ್ಯಕ್ತಿಗಳಾಗಿದ್ದಾರೆ, ಸ್ನೇಹಿತರಾದ ಕೊಟ್ಟೂರು ಎಸ್.ಪ್ರಕಾಶ್, ಇಸ್ಮಾಯಿಲ್, ಸನಾವುಲ್ಲಾ, ರಾಘವೇಂದ್ರ, ಸುರೇಶ್ ಜೊತೆಗಿದ್ದರು . ಉಜ್ಜಿನಿ ಮೂಲದ ಎಂ.ಆರ್.ಹಾಲೇಶ್ ಕೂಡ್ಲಿಗಿಯಲ್ಲಿ ಅಂಚೆ ನೌಕರನಾಗಿದ್ದ, ಕೊಟ್ಟೂರಿನ ಚರಣರಾಜ್ ರಾಂಪುರದ ಜ್ಞಾನತುಂಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿದ್ದ ಎನ್ನಲಾಗಿದೆ.
ಹಗರಿಬೊಮ್ಮನಹಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಹಾಗು ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಸಿಪಿಐ ಟಿ.ಮಂಜಣ್ಣ, ಪಿಎಸೈ ಪಿ.ಸರಳಾ ಸ್ಥಳದಲ್ಲಿಯೇ ಮೊಕ್ಕಂ ಹೂಡಿದ್ದಾರೆ.
ನಿರಂತರ ಮಳೆ ಸುರಿದ ಪರಿಣಾಮ ಈ ಬಾರಿ ಜಲಾಶಯಕ್ಕೆ ಬಾರಿ ಪ್ರಮಾಣದ ನೀರು ಹರಿದು ಬಂದಿತ್ತು, ಅದಲ್ಲದೆ ತುಂಗಭದ್ರ ನದಿಯಿಂದ ಕೂಡ ಈ ಜಲಾಶಯಕ್ಕೆ ನೀರು ಹರಿಸಲಾಗಿತ್ತು, ಹಾಗಾಗಿ ಕಳೆದ ಹಲವು ವರ್ಷಗಳ ನಂತರ ಈ ಮಾಲವಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದಿದೆ, ಹಾಗಾಗಿ ಈ ಬಾಗದಲ್ಲಿ ಸದ್ಯಕ್ಕೆ ಈ ಜಲಾಶಯ ಪ್ರವಾಸಿ ತಾಣವಾಗಿದೆ, ಈ ಕಾರಣದಿಂದ ಪ್ರವಾಸಕ್ಕೆ ಯುವಕರ ಗುಂಪು ಜಲಾಶಯಕ್ಕೆ ಬಂದಿತ್ತು.