ವಿಜಯನಗರ… ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಡಾಣಾಪುರ ಹಾಗೂ ಹನುಮಾನ ಹಳ್ಳಿ ಸೇರಿದಂತೆ ಇಲ್ಲಿರುವ ಅಕ್ಕ ಪಕ್ಕದ ಹತ್ತಾರು ಹಳ್ಳಿಗಳ ಜನ ಸಾಮಾನ್ಯರ ಕಷ್ಟ ಕೇಳುವವರು ಯಾರು ಎನ್ನುವಂತಾಗಿದೆ. ಕಾರಣ ಇಲ್ಲಿರುವ ಗಣಿ ಕಂಪನಿಗಳು ಮತ್ತು ಉಕ್ಕು ಉತ್ಪಾಧನೆಯ ಕಾರ್ಖಾನೆಗಳು ಎಲ್ಲಾ ನಿಯಮಗಳನ್ನ ಗಾಳಿಗೆ ತೂರುತ್ತಿವೆ.
ಅದರ ಪರಿಣಾಮ ಇಲ್ಲಿರುವ ಹಳ್ಳಿಗಳ ಜನ ಸಾಮಾನ್ಯರು ಉಸಿರಾಟದ ತೊಂದರೆ ಸೇರಿದಂತೆ ಇನ್ನಿತರ ಕಾಯಿಲೆಗೆ ತುತ್ತಾಗಿ ಬಳಲುತಿದ್ದಾರೆ. ಹೌದು ಹೊಸಪೇಟೆ ನಗರದಿಂದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನೀವು ಬೆಂಗಳೂರು ಕಡೆಗೆ ಹೊರಟರೆ ಡಾಣಾಪುರ ಬಳಿಯಲ್ಲಿ ಇಂತದ್ದೊಂದು ದುಸ್ಥಿತಿ ನಿಮ್ಮ ಕಣ್ಣಿಗೆ ಕಾಣುತ್ತದೆ.
ಬೈಕ್ ಸವಾರರು ಬಿಳಿ ಬಟ್ಟೆಯನ್ನ ಧರಿಸಿ ಈ ದಾರಿಯಲ್ಲಿ ಸಂಚರಿಸಿದರೆ ಒಂದೆರಡು ನಿಮಿಷದಲ್ಲೇ ಬಟ್ಟೆಯ ಬಣ್ಣ ಬದಲಾಗಿಬಿಡುತ್ತದೆ. ಅಷ್ಟೊಂದು ಗಣಿ ಮತ್ತು ಕಾರ್ಖಾನೆಯ ದೂಳು ಇಲ್ಲಿನ ಗಾಳಿಯಲ್ಲಿ ಸೇರಿಕೊಂಡಿದೆ. ಒಂದಲ್ಲ ಎರಡಲ್ಲ ನಾಲ್ಕಾರು ಗಣಿ ಕಂಪನಿಗಳು ಈ ಬಾಗದಲ್ಲಿವೆ. ಇಲ್ಲಿರುವ ಎಲ್ಲಾ ಕಂಪನಿಗಳು ನಿಯಮಗಳನ್ನ ಮರೆತು ಕೈಗಾರಿಕೆಗಳನ್ನ ನಡೆಸುತ್ತಿವೆ.
ಹಾಗಾಗಿ ಇಲ್ಲಿರುವ ಜನ ಸಾಮಾನ್ಯರಾಗಲಿ ಅಥವಾ ರಸ್ತೆಯಲ್ಲಿ ಸಂಚರಿಸುವ ಸಂಚಾರಿಗಳಿಗೆ ದೂಳಿನ ಕಿರಿ ಕಿರಿ ಸದಾ ಇದ್ದೇ ಇರುತ್ತದೆ. ಅದರಲ್ಲೂ ಕಳೆದ ಒಂದು ತಿಂಗಳಿನಿಂದ ಹೆಚ್ಚಾಗಿರುವ ಬಿಸಿಲು ಗಾಳಿಯಲ್ಲಿ ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಕಣ್ಣು ಬಾಯಿ ಮೂಗು ಮುಚ್ಚಿಕೊಂಡೇ ಈ ಮಾರ್ಗದಲ್ಲಿ ಸಂಚರಿಸಬೇಕಾಗಿದೆ.
ಇನ್ನು ನಿಯಮ ಉಲ್ಲಂಘನೆ ಮಾಡುವ ಇಂತಾ ಕಾರ್ಖಾನೆಗಳ ನಿಯಂತ್ರಣಮಾಡುವ ಸಂಭಂದವೇ ಮಾಲಿನ್ಯ ನಿಯಂತ್ರಣ ಮಂಡಳಿ ಹುಟ್ಟಿಕೊಂಡಿದೆ. ಆದರೆ ಇಲ್ಲಿನ ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲಿರುವ ಕಾರ್ಖಾನೆಗಳ ಮೇಲಿನ ನಿಯಂತ್ರಣ ಕಳೆದುಕೊಂಡು ಆಟ್ಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ.
ಎಲ್ಲದಕ್ಕಿಂತ ಹೆಚ್ಚಾಗಿ ಪರಿಸರ ಜೀವ ಶಾಸ್ತ್ರ ಇಲಾಖೆಯ ಹೊಣೆ ಹೊತ್ತಿರುವ ಸಚಿವ ಆನಂದ್ ಸಿಂಗ್ ಅವರು ಈ ರಸ್ತೆಯಲ್ಲಿ ಎಷ್ಟು ಬಾರಿ ಸಂಚಾರ ನಡೆಸುತ್ತಾರೆ ಎನ್ನುವ ಲೆಕ್ಕ ಹಾಕುವುದು ಕೂಡ ಕಷ್ಟವಾಗಿದೆ. ಅಷ್ಟೊಂದು ಬಾರಿ ಸಂಚರಿಸುವ ಸಚಿವ ಆನಂದ್ ಸಿಂಗ್ ಅವರಿಗೆ ಇಲ್ಲಿನ ಪರಿಸರ ಕಣ್ಣಿಗೆ ಕಾಣುತ್ತಿಲ್ಲವಾ ಎನ್ನುವ ಪ್ರಶ್ನೆ ಇಲ್ಲಿನ ಜನ ಸಾಮಾನ್ಯರಲ್ಲಿ ಕಾಡತೊಡಗಿದೆ. ಮಾಲಿನ್ಯ ನಿಯಂತ್ರಣನೂ ಇಲ್ಲ. ಪರಿಸರ ರಕ್ಷಣೆಯೂ ಇಲ್ಲ. ಹೀಗಿದ್ದರೆ ಈ ಬಾಗದಲ್ಲಿ ಬದುಕುವ ಬಡ ಜನರ ಜೀವನ ಹೇಗಿರುತ್ತೆ ನೀವೆ ಕಲ್ಪಿಸಿಕೊಳ್ಳಿ.
ಈ ಹಿಂದೆ ಇಂತಾ ಪರಿಸ್ಥಿತಿಯನ್ನ ಕಂಡೇ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಗಡೆಯವರು ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಹೆಸರು ಕೊಟ್ಟಿದ್ದರು. ಅದಾದ ಬಳಿಕ ಕೆಲವು ವರ್ಷಗಳ ಕಾಲ ಪರಿಸ್ಥಿತಿ ಸುಧಾರಿಸುತ್ತಾ ಬಂದಿತ್ತು. ಆದರೆ ಇದೀಗ ಮತ್ತೆ ಆ ಪರಿಸ್ಥಿತಿ ಮುಂದುವರೆದಿದೆ, ಇಂತ ಎಲ್ಲಾ ಲೋಪದೋಷಗಳ ವಿರುದ್ದ ಹೋರಾಡಲು ಎಸ್.ಆರ್. ಹಿರೇಮಠ್ ಮತ್ತು ನಿವೃತ್ತ ನ್ಯಾಯಮೂರ್ತಿ ಸಂತೊಷ್ ಹೆಗ್ಗಡೆಯವರು ಮತ್ತೆ ಹೋರಾಟಕ್ಕೆ ಇಳಿಯಬೇಕಾಗಿದೆ.
ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.