ವಿಜಯನಗರ.. ಹೌದು ಈ ಪೊಟೊದಲ್ಲಿ ಕಾಣುವ ಯುವಕನ ಗೋಳಿನ ಕಥೆಯಿದು, ಅಂದಹಾಗೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಬನ್ನಿಕಲ್ಲು ಗ್ರಾಮದ ಸಂತೋಷ್ ಎನ್ನುವ ಈ ಯುವಕ ಕಳೆದ 2019/20ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಶೇಖಡ 97%ರಷ್ಟು ಅಂಕಗಳಿಸುವ ಮೂಲಕ ತನ್ನೂರಿಗೆ ಕೀರ್ತಿ ತರುವುದರ ಜೊತೆಗೆ ಹೆತ್ತ ತಂದೆ ತಾಯಿಯ ಕನಸನ್ನ ನನಸಾಗಿಸಿದವನು. ಮಗ 97ರಷ್ಟು ಅಂಕಗಳಿಸಿದ್ದಾನೆ ಇನ್ನೇನು ಒಂದೆರಡು ವರ್ಷಗಳಲ್ಲಿ ಮಗನಿಗೆ ಸರ್ಕಾರಿ ನೌಕರಿ ಸಿಗುತ್ತೆ ನಮ್ಮೆಲ್ಲ ಕಷ್ಟಗಳು ದೂರಾಗುವವು ಎಂದು ಸಂತೋಷನನ್ನ ಹೆತ್ತ ತಂದೆ ತಾಯಿ ಸಂತೋಷಟ್ಟಿದ್ರು, ಆದರೆ ಹೆತ್ತವರ ಈ ಸಂತೋಷ ಬಹು ದಿನಗಳ ಕಾಲ ಉಳಿಯಲಿಲ್ಲ, ಕಾರಣ ಈ ಬನ್ನಿಕಲ್ಲು ಗ್ರಾಮದ ಈ ಬಡ ವಿಧ್ಯಾರ್ಥಿ ಗಳಿಸಿದ 97%ರಷ್ಟು ಅಂಕಕ್ಕೆ ಇದೀಗ ಬೆಲೆ ಇಲ್ಲದಂತಾಗಿದೆ. ಹಾಗಾಗಿ ಸರ್ಕಾರ ಎಷ್ಟೇ ನೇರ ನೇಮಕಾತಿ ಮಾಡಿಕೊಂಡರು,ಇನ್ನೂ ಹತ್ತು ವರ್ಷಗಳು ಕಳೆದರೂ ಈತನಿಗೆ ಸರ್ಕಾರಿ ಕೆಲಸ ಸಿಗುವುದು ಅಸಾಧ್ಯ.
ಅಯ್ಯೋ ಕಷ್ಟ ಪಟ್ಟು ಓದಿದವರಿಗೆ ಬೆಲೆ ಎಲ್ಲಿದೆ ಹೇಳಿ ಸರ್. ಅವರು ಕೆಲಸ ಪಡೆಯಲು ಸಲ್ಲಿಸಿದ ಅರ್ಜಿಯನ್ನ ಸಹ ಅವರಿಗೆ ಭರ್ತಿಮಾಡಲು ಬರುವುದಿಲ್ಲ, ಅಂತವರು ಇದೀಗ ವಿಲೇಜ್ ಅಕೌಂಟೆಂಟಗಳಾಗುತಿದ್ದಾರೆ, ನಾವು ಕಷ್ಟಪಟ್ಟು ಹಗಲು ರಾತ್ರಿ ಕಣ್ಣಲ್ಲಿ ಎಣ್ಣಿ ಬಿಟ್ಟುಕೊಂಡು ಓದಿ 97ರಷ್ಟು ಅಂಕಗಳಿಸಿದರೂ ನಮಗೆ ಕೆಲಸ ಸಿಗಲಿಲ್ಲ, ಇದೆಂತ ದುರಂತದ ಬದುಕು ನಮ್ಮದು,ಇನ್ನು ಹತ್ತು ವರ್ಷಗಳ ಕಾಲ ಸರ್ಕಾರ ನೇರ ನೇಮಕಾತಿ ಮಾಡಿದರೂ ನಮಗೆ ಅವಕಾಶ ಸಿಗುವುದು ಕಷ್ಟ ಎಂದು ಈ ಸಂತೋಷ್ ಗೋಳಾಡುತಿದ್ದಾನೆ.
ಹೌದು ಸಂತೋಷನ ಈ ಕಣ್ಣೀರಿಗೆ ಕಾರಣ ಸರ್ಕಾರ ಮಾಡಿದ ಎಡವಟ್ಟು, ಕೊರೊನ ಮಹಾಮಾರಿ ನಿಯಂತ್ರಣದ ಹೆಸರಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯನ್ನ ಬದಲಿಸಿದ ಸರ್ಕಾರ ಮಾಡಬಾರದ ಎಡವಟ್ಟುಮಾಡಿ ಕಷ್ಟಪಟ್ಟು ಓದಿದ ವಿಧ್ಯಾರ್ಥಿಗಳ ಕಣ್ಣಲ್ಲಿ ಇದೀಗ ರಕ್ತ ಕಣ್ಣೀರು ತರಿಸುತ್ತಿದೆ. ಹೌದು 2020/21ನೇ ಸಾಲಿಗಿಂತ ಮುಂಚಿತವಾಗಿ ಪಿ.ಯು.ಸಿ.ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿದ ವಿಧ್ಯಾರ್ಥಿಗಳಿಗೆ ಇದೀಗ ಬೆಲೆ ಇಲ್ಲದಂತಾಗಿದೆ. ಕಾರಣ 2020/21ನೇ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ.ಪರೀಕ್ಷೆ ಬರೆಸದೆ ವಿಧ್ಯಾರ್ಥಿಗಳನ್ನ ಪಾಸ್ ಮಾಡಿದ್ದು, ಆ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪ್ರಥಮ ಪಿ.ಯು.ಸಿ. ಅಂಕಪಟ್ಟಿ ಆಧಾರದವಾಗಿಟ್ಟುಕೊಂಡ ಸರ್ಕಾರ 5 ಕೃಪಾಂಕಗಳನ್ನ ಕೊಟ್ಟು ಉತ್ತೀರ್ಣಮಾಡುವ ಮೂಲಕ ವಿಧ್ಯಾರ್ಥಿಗಳನ್ನ ಪಾಸ್ ಮಾಡಿ ಕೈ ತೊಳೆದುಕೊಂಡಿತು. ಈ ಕಾರಣಕ್ಕೆ ಇದೊಂದೇ ಸಾಲಿನಲ್ಲಿ ರಾಜ್ಯದಲ್ಲಿ ಎರಡು ಸಾವಿರದ ನಾಲ್ಕುನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳು 600ಕ್ಕೆ 600 ಅಂಕಗಳಿಸಿ ಉತ್ತೀರ್ಣರಾದರು, ಇನ್ನು ಎಂಬತ್ತು ಸಾವಿರಕ್ಕಿಂತ ಹೆಚ್ಚು ವಿಧ್ಯಾರ್ಥಿಗಳು ಶೇಖಡ 99% ಮತ್ತು 98% ಹಾಗೂ 97% ರಷ್ಟು ಅಂಕಗಳಿಸಿ ಉತ್ತೀರ್ಣರಾದರು. 2020/21 ಸಾಲಿನಲ್ಲಿ ಸ್ಪೋಟಗೊಂಡ ಈ ಪಿ.ಯು.ಸಿ.ಫಲಿತಾಂಶ ಈ ಮೊದಲು ಪರೀಕ್ಷೆ ಬರೆದ ವಿಧ್ಯಾರ್ಥಿಗಳ ನೆಮ್ಮದಿ ಹಾಳುಮಾಡಿದೆ.
ಕಾರಣ ರಾಜ್ಯದಲ್ಲಿ ಎಲ್ಲೇ ನೇರ ನೇಮಕಾತಿ ನಡೆದರೂ 2020/21 ಸಾಲಿನಲ್ಲಿ ಪಾಸಾದ ವಿದ್ಯಾರ್ಥಿಗಳೇ ಆಯ್ಕೆ ಆಗುವುದು ಕಂಡುಬರುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಕಂದಾಯ ಇಲಾಖೆಯಲ್ಲಿ ಸಾವಿರದ ಏಳು ನೂರಕ್ಕೂ ಹೆಚ್ಚು ಗ್ರಾಮ ಲೆಕ್ಕಾಧಿಕಾರಿಗಳ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ. ಸರ್ಕಾರ ಮಾಡಿಕೊಳ್ಳುತ್ತಿರುವ ಈ ನೇಮಕಾತಿಯಲ್ಲಿ ಕೊರೊನ ಬ್ಯಾಚಿನಲ್ಲಿ ಉತ್ತೀರ್ಣರಾದ ವಿಧ್ಯಾರ್ಥಿಗಳೇ ನೇಮಕವಾಗುತಿದ್ದು, ಈ ಮೊದಲು ಪಾಸಾದ ವಿಧ್ಯಾರ್ಥಿಗಳು ಮೂಲೆಗುಂಪಾಗಿದ್ದಾರೆ. ಅದರ ಪರಿಣಾಮ ಸಂತೋಷನಂತ ಸಾವಿರಾರು ವಿಧ್ಯಾರ್ಥಿಗಳು ರಾಜ್ಯ ಸರ್ಕಾರದ ಶಿಕ್ಷಣ ನೀತಿಯ ವಿರುದ್ದ ಬೀದಿಗೆ ಇಳಿಯುವ ಸಾಧ್ಯತೆ ಇದೆ. ಈ ಸಂಭಂದ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿಕೊಳ್ಳುತ್ತಿರುವ ಅಭ್ಯರ್ಥಿಗಳು ಮುಂದೊಂದು ದಿನ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರೂ ಆಶ್ಚರ್ಯ ಪಡಬೇಕಿಲ್ಲ.
ಸರ್ಕಾರ ಮಾಡಿಕೊಳ್ಳುವ ನೇರ ನೇಮಕಾತಿಯಲ್ಲಿ 2020/21 ಸಾಲಿನ ಕೊರೊನ ಬ್ಯಾಚಿನಲ್ಲಿ ಪರೀಕ್ಷೆ ಬರೆಯದ ವಿಧ್ಯಾರ್ಥಿಗಳೇ ತುಂಬಿದರೆ, ಅದಕ್ಕಿಂತ ಪೂರ್ವದಲ್ಲಿ ಕಷ್ಟಪಟ್ಟು ಓದಿದ ನಮ್ಮಂತ ವಿಧ್ಯಾರ್ಥಿಗಳ ಪಾಡೇನು, ಸರ್ಕಾರ ಮೊದಲು ನಮ್ಮನ್ನ ಪರಿಗಣನೆಗೆ ತೆದುಕೊಂಡು ನೇರ ನೇಮಕಾತಿಮಾಡಿಕೊಳ್ಳಬೇಕು ಎಂದು ಪಟ್ಟು ಹಿಡಿಯಲಿದ್ದಾರೆ. ಪರೀಕ್ಷೆ ಬರೆಯದವರು ನೌಕರಿ ಪಡೆದು ಚನ್ನಾಗಿದ್ದಾರೆ, ಕಷ್ಟಪಟ್ಟು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಓದಿದ ನಾವು ಬೀದಿಯಲ್ಲಿ ನಿಂತಿದ್ದೇವೆ. ಆಗಿರುವ ಲೋಪ ಸರಿಪಡಿಸದೆ ಇದ್ದರೆ ರಾಜ್ಯ ಸರ್ಕಾರದ ವಿರುದ್ದ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಈ ಮೂಲಕ ಸರ್ಕಾರ ಎಚ್ಚರಿಕೆ ರವಾನಿಸಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.