ಮಂಡ್ಯ..ಕಳ್ಳತನಕ್ಕೆ ಬಂದ ಕಳ್ಳರು ಏನೆಲ್ಲ ಕೃತ್ಯಗಳನ್ನ ಮಾಡಿ ಅಲ್ಲಿಂದ ಪರಾರಿ ಆಗುತ್ತಾರೆ ಎಂದು ಎಲ್ಲರ ಕಲ್ಪನೆಯಲ್ಲೂ ಸಹಜವಾಗಿ ಇದ್ದೇ ಇರುತ್ತೆ. ಅತ್ಯಂತ ದುಬಾರಿ ಮತ್ತು ಬೆಲೆಬಾಳುವ ವಸ್ತುಗಳು ಇರುವ ಅಂಗಡಿ, ಮನೆಗಳಿಗೆ ಕನ್ನ ಹಾಕುವ ಕಳ್ಳರು ಅಲ್ಲಿರುವ ಎಲ್ಲಾ ವಸ್ತುಗಳನ್ನ ಕದ್ದು ಪರಾರಿಯಾಗುತ್ತಾರೆ.ಆದರೆ ಇಲ್ಲೊಂದು ಅಪರೂಪದಲ್ಲಿ ಅಪರೂಪದ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಕಳ್ಳತನಕ್ಕೆ ಬಂದ ಕಳ್ಳ ಕದ್ದಿರುವುದೇನು ಎನ್ನುವುದಕ್ಕಿಂತ ಬಿಟ್ಟು ಹೋಗಿರುವುದು ಏನು ಎನ್ನುವುದೇ ಚರ್ಚೆಗೆ ಗ್ರಾಸವಾಗಿದೆ.
ಹೌದು ಇಂತದ್ದೊಂದು ಪ್ರಕರಣ ಬೆಳಕಿಗೆ ಬಂದಿರುವುದು ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ. ಹೌದು ಈ ಅಂಗನಾಡಿ ಕಳ್ಳತನಕ್ಕೆ ನಿನ್ನೆ ರಾತ್ರಿ ಪ್ರಯತ್ನ ನಡೆದಿದೆ.ಆದರೆ ಅಂಗನವಾಡಿಯಲ್ಲಿದ್ದ ಯಾವೊಂದು ವಸ್ತುಗಳು ಕೂಡ ಕಳ್ಳತನವಾಗಿಲ್ಲ, ಬದಲಾಗಿ ಅಂಗನವಾಡಿ ಕೇಂದ್ರದಲ್ಲಿದ್ದ ದಿನಸಿ ವಸ್ತುಗಳನ್ನ ಪಡೆದ ಕಳ್ಳ ಅಲ್ಲೇ ಗ್ಯಾಸ್ ಆನ್ ಮಾಡಿ ಅಡುಗೆ ಸಿದ್ದಪಡಿಸಿಕೊಂಡು ಊಟಮಾಡಿ ಹೋಗಿದ್ದಾನೆ, ಅಂದಹಾಗೆ ಚರ್ಚೆಗೆ ಗ್ರಾಸವಾಗಿರುವ ವಿಷಯ ಇದಲ್ಲ. ಅಂಗನಾಡಿ ಬೀಗ ಮುರಿದು ಒಳ ನುಗ್ಗಿದ ಕಳ್ಳ ಏನೆಲ್ಲ ಕಳ್ಳತನಮಾಡಿ ಕದ್ದೊಯ್ದಿದ್ದಾನೆ ಎಂದು ಹುಡುಕುತ್ತಾ ಹೋದರೆ ಒಂದೇ ಒಂದು ವಸ್ತು ಕೂಡ ಇಟ್ಟ ಸ್ಥಳದಿಂದ ಕದಲಿಲ್ಲ.
ಆದರೆ ಅಲ್ಲಿರುವ ರಿಜಿಸ್ಟರ್ ಬುಕಲ್ಲಿ ದೊಡ್ಡದೊಂದು ಬರವಣಿಗೆ ಕಣ್ಣಿಗೆ ಬಿದ್ದಿದೆ. ಹೌದು ಅಡುಗೆ ಸಿದ್ದಪಡಿಸಿಕೊಂಡ ಊಟಮಾಡಿದ ಕಳ್ಳ ಕೊನೆಗೆ ಅಲ್ಲಿಂದ ಮರಳು ಮುಂಚೆ ತನ್ನಲ್ಲಿರುವ ಆಲೋಚನೆ ಮತ್ತು ಅನಿಸಿಕೆಗಳನ್ನ ಬರವಣಿಗೆ ರೂಪದಲ್ಲಿ ಪ್ರದರ್ಶಿಸಿ ಮೂರು ಪುಠಗಳು ತುಂಬುವಷ್ಟು ಬರೆದು ಹೋಗಿದ್ದಾನೆ. ಹೌದು ಜೀವನದ ಆಗು ಹೋಗು, ಕಷ್ಟ ನಷ್ಟಗಳು, ಸುಖ ದುಃಖ, ಜನರ ದೃಷ್ಠಿಯಲ್ಲಿ ಜೀವನದ ಬದುಕು ಏನೆಂದು ಕಥೆ ರೂಪದಲ್ಲಿ ಬರೆದಿರುವ ಕಳ್ಳ ತನ್ನಲ್ಲಿ ಕೂಡ ಒಬ್ಬ ಸಾಹಿತಿ ಅಡಗಿದ್ದಾನೆ ಎಂದು ತೋರಿಸಿ ಹೋಗಿದ್ದಾನೆ.
ಇನ್ನು ಬೆಳಗಾಗುತಿದ್ದಂತೆ ಅಂಗನವಾಡಿ ಕಾರ್ಯಕರ್ತೆ ಎಂದಿನಂತೆ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಇಲ್ಲಿನ ಪಂಡಿತನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮಹದೇವು ಅವರು ಕೂಡ ವಿಷಯ ತಿಳಿದು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುವುದರ ಜೊತೆಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸದ್ಯಕ್ಕೆ ಈ ಕಳ್ಳತನ ಪ್ರಕರಣ ಚೆರ್ಚೆಗೆ ಗ್ರಾಸವಾಗಿದ್ದು ಯಾವ ಕಾರಣಕ್ಕೆ ಈ ಕಳ್ಳ ಈ ಅಂಗನವಾಡಿ ಬೀಗ ಮುರಿದು ಕಳ್ಳತನಕ್ಕೆ ಮುಂದಾದ, ಏನು ಕದ್ದಿದ್ದಾನೆ ಎಂದು ಶೋಧನೆ ನಡೆಸುತ್ತಲೇ ಇದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.