You are currently viewing ಡಾಕ್ಟರ್ ರಾಜ್ ಕುಟುಂಭ ಹಾಗೂ ಹೊಸಪೇಟೆ ನಗರದ ಜನತೆಯನಡುವಿನ ಸಂಭಂದ ಎಂದಿನಿಂದ ಇದೆ ಗೊತ್ತಾ ನಿಮಗೆ.

ಡಾಕ್ಟರ್ ರಾಜ್ ಕುಟುಂಭ ಹಾಗೂ ಹೊಸಪೇಟೆ ನಗರದ ಜನತೆಯನಡುವಿನ ಸಂಭಂದ ಎಂದಿನಿಂದ ಇದೆ ಗೊತ್ತಾ ನಿಮಗೆ.


ವಿಜಯನಗರ… ಡಾಕ್ಟರ್ ರಾಜ್ಕುಮಾರ್ ಅವರಿಗೆ ಸಿನಿಮಾರಂಗದಲ್ಲಿ ಅವಕಾಶ ಸಿಗುವ ಮುಂಚೆ ರಂಗಭೂಮಿ ಕಲಾವಿದರಾಗಿದ್ದರು ಎನ್ನುವ ವಿಷಯ ಬಹುತೇಕರಿಗೆ ಗೊತ್ತಿದೆ, ಆದರೆ ಅಂದು ರಂಗಭೂಮಿ ಕಲಾವಿಧರಾಗಿದ್ದ ಮುತ್ತುರಾಜ್ ಅವರಿಗೆ ಸಿನಿಮಾರಂಗದಲ್ಲಿ ಸೇವೆ ಸಲ್ಲಿಸುವ ಅವಕಾಶ ಕೂಡಿ ಬಂದಾಗ ಅವರು ಯಾವ ನಾಟಕ ಕಂಪನಿಯಲ್ಲಿ ಕೆಲಸಮಾಡುತಿದ್ದರು, ಆ ನಾಟಕ ಕಂಪನಿಯ ಯಾವ ಊರಿನಲ್ಲಿತ್ತು ಎಂದು ಯಾರಿಗಾದ್ರು ಗೊತ್ತಿದೆಯಾ, ಹೌದು ಇದೇ ವಿಷಯವನ್ನ ನಿಮಗೆ ಎಳೆ ಎಳೆಯಾಗಿ ಬಿಡಿಸಿಡಲು ನಿಮ್ಮ ಮುಂದೆ ಬಂದಿದ್ದೇನೆ, ಸಮಯವನ್ನ ಬಿಡುವುಮಾಡಿಕೊಂಡು ಸಂಪೂರ್ಣ ಈ ಸ್ಟೋರಿಯನ್ನ ಓದಿ.


ಹೌದು ಕನ್ನಡ ಚಿತ್ರ ರಂಗದ ಹೆಗ್ಗಳಿಕೆ ಎಂದು ಕರೆಯುವ ಡಕ್ಟರ್ ರಾಜ್ ಕುಮಾರ್ ಅವರಿಗೂ ಮತ್ತು ನಮ್ಮ ಹೊಸಪೇಟೆ ನಗರಕ್ಕೂ ಒಂದು ಅವಿನಾಭಾವ ಸಂಭಂದವಿತ್ತು, ಅದೇನಂದ್ರೆ ಮುತ್ತುರಾಜ್ ರಾಜಕುಮಾರ್ ಆಗುವುದಕ್ಕಿಂತ ಮುಂಚಿತವಾಗಿ ಈ ಹೊಸಪೇಟೆ ನಗರದಲ್ಲಿ ತಂಗಿದ್ರು, ಎರಡು ನಾಟಕ ಕಂಪನಿಯಲ್ಲಿ ತಮ್ಮ ನಟನೆಯನ್ನ ಪ್ರದರ್ಶಿಸಿ ಅಂದೇ ಈ ನಗರಕ್ಕೆ ಅಚ್ಚು ಮೆಚ್ಚಿನ ಮುತ್ತುರಾಜ್ ಆಗಿದ್ರು, ಹೌದು 1953 ಕ್ಕಿಂತ ಪೂರ್ವದಲ್ಲಿ ಮುತ್ತುರಾಜ್ ಈ ನಗರದಲ್ಲಿ ಸುಬ್ಬಯ್ಯ ನಾಯ್ಡು, ನಂತರ ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಅಭಿನಯಿಸಿ ಈ ಹೊಸಪೇಟೆ ನಗರದ ಜನತೆಗೆ ಈ ಮುತ್ತುರಾಜ್ ಚಿರ ಪರಿಚಿತರಾಗಿದ್ದರು, ಹಾಗಾಗಿ ಹೊಸಪೇಟೆ ನಗರದ ಜನತೆಗೆ ಡಕ್ಟರ್ ರಾಜ್ ಕುಮಾರ ಎಂದ್ರೆ ಎಲ್ಲಿಲ್ಲದ ಪ್ರೀತಿ,
ಅಷ್ಟೇಯಾಕೆ ಅವರ ಮಕ್ಕಳ ಸಿನಿಮಾಗಳು ಈ ನಗರದಲ್ಲಿ ಬಿಡುಗಡೆಯಾದ್ರೆ ಈ ನಗರದಲ್ಲಿ ಇಂದಿಗೂ ದೊಡ್ಡದೊಂದು ಸಂಭ್ರಮವೇ ಮನೆಮಾಡುತ್ತೆ. ಅದರಲ್ಲೂ ಪುನಿತ್ ರಾಜ್ ಕುಮಾರ್ ಅವರು ಅಭಿನಯಿಸಿದ ಸಿನಿಮಾಗಳು ಹೊಸಪೇಟೆ ನಗರದಲ್ಲಿ ಬಿಡುಗಡೆ ಆದ್ರೆ ಅವರ ಅಭಿಮಾನಿಗಳನ್ನ ನಿಯಂತ್ರಿಸುವಷ್ಟರಲ್ಲೇ ಪೋಲೀಸ್ ಇಲಾಖೆ ಹೈರಾಣಾಗಿ ಬಿಡುತಿತ್ತು, ಇತ್ತೀಚೆಗೆ ಅಪ್ಪು ಅವರ ಅಗಲಿಕೆಯ ಹೆಚ್ಚು ನೊವುಂಡ ನಗರ ಎಂದರೆ ಅದು ಹೊಸಪೇಟೆ ಎಂದ್ರೆ ತಪ್ಪಗಲಾರದು.


ಹೀಗೆ ಮುತ್ತುರಾಜ್ ಮತ್ತು ಅವರ ಕುಟುಂಭವನ್ನ ತುಂಬಾ ಹಚ್ಚಿಕೊಂಡ ನಗರ ಎಂದ್ರೆ ಅದು ಹೊಸಪೇಟೆ. ಅದರಲ್ಲೂ ಹೊಸಪೇಟೆ ನಗರದಲ್ಲಿ ಡಾಕ್ಟರ್ ರಾಜಕುಮಾರ ಅವರನ್ನ ತುಂಬಾ ಹತ್ತಿರದಿಂದ ನೋಡಿದವರು ತುಂಬಾ ಜನ ಇದ್ದಾರೆ, ಅದರಲ್ಲಿ ಪ್ರಮುಖರು ಎಂದರೆ ಈ ಇಬ್ಬರು. ಟಿ ಪರಮೇಶ್ವರಪ್ಪ ಮತ್ತು ಮರಿಸ್ವಾಮಿ, ಈ ಇಬ್ಬರು ಹಿರಿಯ ಜೀವಿಗಳು ಹೊಸಪೇಟೆ ನಗರದ ವಾಲ್ಮಿಕಿ ವ್ರತ್ತದ ಓಂಕಾರೇಶ್ವರ ದೇವಸ್ಥಾನದ ಬಳಿಯ ನಿವಾಸಿಗಳು,
ಇನ್ನು ಮುತ್ತುರಾಜ್ ಹೊಸಪೇಟೆ ನಗರದಲ್ಲಿ ನಾಟಕ ಪ್ರದರ್ಶನ ನೀಡುವ ಸಂದರ್ಭದಲ್ಲಿ, ಈ ಓಂಕಾರೇಶ್ವರ ದೇವಸ್ಥಾನದ ಪಕ್ಕದ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು ಎಂದು ಈ ಇಬ್ಬರು ಹಿರಿಯ ಜೀವಿಗಳು ಹೇಳುತ್ತಾರೆ.ಇನ್ನು ಬಿಡುವಿನ ಸಮಯದಲ್ಲಿ ಇದೇ ದೇವಸ್ಥಾನದಲ್ಲಿ ಕುಳಿತು ಓಂಕಾರೇಶ್ವರ ಧ್ಯಾನಮಾಡುತ್ತಿದ್ರು ಎನ್ನುವ ನೆನಪಿನ ಬುತ್ತಿಯನ್ನ ಬಿಚ್ಚುತ್ತಾರೆ ಪರಮೇಶ್ವರಪ್ಪ.ಇನ್ನು ವ್ರತ್ತಿಯಲ್ಲಿ ಈ ಪರಮೇಶ್ವರಪ್ಪನವರರು ಶಿಕ್ಷಕರಾಗಿದ್ದರು ಕೂಡ ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ರು, ಹಾಗಾಗಿ ಹೊಸಪೇಟೆ ನಗರಕ್ಕೆ ಯಾವುದೇ ನಾಟಕ ಕಂಪನಿಗಳು ಬಂದ್ರೂ ನಗರದ ಈಗಿನ ನಗರಸಭೆಯ ಪಕ್ಕದ ಬಯಲು ಜಾಗದಲ್ಲೇ ನಾಟಕ ಟೆಂಟಗಳು ನಿರ್ಮಾಣವಾಗುತ್ತಿದ್ದವು ಎಂದು ಹೇಳುತ್ತಾರೆ.
ಇದನ್ನ ಹೊರತು ಪಡಿಸಿದ್ರೆ ಚಪ್ಪರದ ಹಳ್ಳಿಯ ಪ್ರದೇಶದಲ್ಲಿ ನಾಟಕದ ಟೆಂಟಗಳು ನಿರ್ಮಾಣವಾಗುತಿದ್ದವು, ಹಾಗಾಗಿ ಅಲ್ಲಿನ ಕಲಾವಿದರ ಪರಿಚಯವನ್ನ ಸಹಜವಾಗಿಯೇ ಮಾಡಿಕೊಳ್ಳುತ್ತಿದ್ದರು ಪರಮೇಶ್ವರಪ್ಪ, ಹೀಗೆ ನಗರಕ್ಕೆ ಬಂದು ಹೋದ ನೂರಾರು ಕಲಾವಿದರಲ್ಲಿ ಹೆಚ್ಚು ಸ್ನೇಹ ವಿಸ್ವಾಸ ಬೆಳಸಿದ್ದು ಮುತ್ತುರಾಜ್ ಜೊತೆ, ಬಿಡುವಿನ ವೇಳೆಯಲ್ಲಿ ಜೊತೆಗೆ ಕುಳಿತು ಕೊಳ್ಳುವುದು ಕುಷಲೋಪರಿ ವಿಚಾರಮಾಡುವುದು ಮೂರ್ನಾಲ್ಕು ತಿಂಗಳಿನಿಂದಲೇ ನಡೆದಿತ್ತು, ಅಂದೊಂದು ದಿನ ನಗರದ ರಾಮ ಥೇಟರ್ ಸರ್ಕಲನಲ್ಲಿ ಸೇರಿದ ಮುತ್ತುರಾಜ್ ಮತ್ತು ಟಿ ಪರಮೇಶ್ವರಪ್ಪ ಇಬ್ಬರು ಒಂದು ಖುಷಿಯ ವಿಚಾರವನ್ನ ಹಂಚಿಕೊಂಡಿದ್ದರು.


ಮುತ್ತುರಾಜನನ್ನ ರಾಜಕುಮಾರ ಎಂದು ಕರೆದ ಮೊದಲು ಅಭಿಮಾನಿಗಳು ಇವರೆ.
ಅದೇನಂದ್ರೆ ಇಷ್ಟು ದಿನಗಳ ಕಾಲ ನಾಟಕದಲ್ಲಿ ಅಭಿನಯಿಸಿತಿದ್ದ ನನಗೆ ಮೊಟ್ಟ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶವೊಂದು ಬಂದಿದೆ ಎಂದು ಮುತ್ತುರಾಜ್ ಈ ಪರಮೇಶ್ವರಪ್ಪನ ಜೊತೆ ಸಂತೋಷ ಹಂಚಿಕೊಂಡಿದ್ರಂತೆ, ಅದಕ್ಕಾಗಿ ಹೊಟೆಲ್ ನಲ್ಲಿ ಸಿಹಿ ತಿಂಡಿಯನ್ನ ತಿಂದು ಬಾಯಿ ಸಿಹಿಮಾಡಿಕೊಂಡಿದ್ದರಂತೆ.ಈಗಿನ ರಾಮ ಥೇಟರ್ ಎಂದು ನೀವು ಕರೆಯುವ ಈ ಸ್ಥಳ ಮುಂಚೆ ಆಜಮ್ ಟಾಕಿಸ್ ಎಂದು ಕರೆಯಲ್ಪಡುತಿತ್ತಂತೆ.ಆ ಸ್ಥಳದಲ್ಲಿ ನಿಂತ ಮುತ್ತುರಾಜ ಅವರು ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಅಭಿನಯಿಸಲು ಹೆಚ್.ಎಲ್.ಎನ್.ಸಿಂಹ ಅವರಿಂದ ಬಂದಿರುವ ಪತ್ರವನ್ನ ಪರಮೇಶ್ವರಪ್ಪನವರಿಗೆ ತೋರಿಸಿದ್ದರಂತೆ ಮುತ್ತುರಾಜ್. ಇನ್ನು ಮುತ್ತುರಾಜ್ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ನಟಿಸಿದ ನಂತರವೂ ಹೊಸಪೇಟೆಯ ಜೊತೆಗಿನ ಸಂಭಂದ ಹಾಗೇ ಮುಂದುವರೆದಿತ್ತು, ಯಾಕೆಂದ್ರೆ ಉತ್ತರ ಕರ್ನಾಟಕದಲ್ಲಿ ಹೊಸಪೇಟೆ ನಗರಕ್ಕೆ ಯಾವುದೇ ನಾಟಕ ಕಂಪನಿ ಬಂದರು ಯಶಸ್ವಿ ಪ್ರದರ್ಶನ ನೀಡಿ ಹಿಂದಿರುಗಿದ ಉದಾಹರಣೆಗಳೇ ಹೆಚ್ಚು. ಅಷ್ಟೊಂದು ಕಲಾಭಿಮಾನಿಗಳು ಈ ಹೊಸಪೇಟೆನಗರದಲ್ಲಿ ಅಂದಿಗೂ ಇದ್ರು.ಹಾಗಾಗಿ ಮುತ್ತುರಾಜ್ ರಾಜಕುಮಾರ್ ಆದಮೇಲೂ ಹೊಸಪೇಟೆ ನಗರದ ಜೊತೆಗಿನ ಸಂಭಂದವನ್ನ ಕಳೆದುಕೊಳ್ಳಲಿಲ್ಲ.


ಪ್ರವಾಹಕ್ಕೆ ಭಯಪಟ್ಟು ಒಂದು ರಾತ್ರಿ ಜೋಳದ ರಾಶಿ ಗುಡ್ಡದ ಮೇಲೆ ವಾಸವಿದ್ದರು ರಾಜಣ್ಣ.

ಹೌದು ಒಂದು ದಿನ ನಾಟಕ ಪ್ರದರ್ಶನಕ್ಕೆ ಹೊಸಪೇಟೆ ನಗರಕ್ಕೆ ಬಂದಂತ ಸಂದರ್ಭದಲ್ಲಿ ತುಂಗಭದ್ರ ಜಲಾಸಯದ ಆಣೆಕಟ್ಟೆ ಹೊಡೆದಿದೆ ಎನ್ನುವ ಸುಳ್ಳು ಸುದ್ದಿಯನ್ನ ತಿಳಿದ ನಾಟಕ ಕಂಪನಿಯ ಎಲ್ಲಾ ಕಲಾವಿದರು ಹೊಸಪೇಟೆ ಹೊರ ವಲಯದಲ್ಲಿರುವ ಜೋಳದ ರಾಶಿ ಗುಡ್ಡವನ್ನೇರಿದ ನೆನಪುಗಳನ್ನ ಮರಿಸ್ವಾಮಿಯವರು ಬಿಚ್ಚಿಡುತ್ತಾರೆ, ಅಂದೊಂದು ದಿನ ಬೋರ್ಗರೆಯುವ ಮಳೆ ಹೊಸಪೇಟೆ ನಗರದ ತಗ್ಗು ಪರದೇಶದ ತುಂಬೆಲ್ಲ ನೀರು ತುಂಬಿಕೊಂಡು ಹೊಸಪೇಟೆ ನಗರ ಒಂದು ರೀತಿಯ ನಡುಗಡ್ಡೆಯಾಗಿ ಗೋಚರವಾಗಿತ್ತಂತೆ. ಈ ವಾತವರಣದಲ್ಲೇ ಮತ್ತೊಂದು ಗಾಳಿ ಸುದ್ದಿ ಹಬ್ಬಿತ್ತು, ಅದೇನೆಂದ್ರೆ ಹೊಸಪೇಟೆ ಪಕ್ಕದಲ್ಲೇ ನೂತನವಾಗಿ ನಿರ್ಮಾಣವಾಗುತ್ತಿರುವ ತುಂಗಭದ್ರ ಜಲಾಶಯದ ನಿರ್ಮಾಣ ಹಂತದಲ್ಲಿರುವ ಆಣೆಕಟ್ಟು ಹೊಡೆದಿದೆ ಎಂದು.  ಜಲಾಶಯದ ನೀರು ಹೊಸಪೇಟೆ ನಗರವನ್ನ ಸಂಪೂರ್ಣ ಆವರಿಸಲಿದೆ ಎಂದು ಸುಳ್ಳು ಸುದ್ದಿ ನಗರದೆಲ್ಲೆಡೆ ಹಬ್ಬಿ ನಗರದ ಜನಸಾಮಾನ್ಯರು ಹೊಸಪೇಟೆ ಸುತ್ತ ಮುತ್ತಲಿರುವ ಗುಡ್ಡಗಳನ್ನ ಏರಿ ತಮ್ಮ ಜೀವವನ್ನ ಉಳಿಸಿಕೊಂಡರಾಯ್ತು ಎಂದು ಮನೆ ಮಠಗಳನ್ನ ಬಿಟ್ಟು ರಾತ್ರೋ ರಾತ್ರಿ ಗುಡ್ಡಗಳ ಕಡೆಗೆ ಕುಟುಂಭ ಪರಿವಾರ ಸಮೇತರಾಗಿ ಹೊರಟು ಬಿಟ್ಟಿದ್ದರು, ಇನ್ನು ನಗರದಲ್ಲಿ ಬೀಡು ಬಿಟ್ಟಿದ್ದ ನಾಟಕ ಕಂಪನಿಯ ಎಲ್ಲರಿಗೂ ಆತಂಕ ಎದುರಾಗಿತ್ತು, ಜನಗಳು ನಗರವನ್ನ ತೊರೆದು ಅಕ್ಕಪಕ್ಕದ ಗುಡ್ಡಗಳನ್ನ ಏರಲು ಹೊರಟಿರುವವರ ಜೊತೆಯಲ್ಲಿಯೇ ರಾಜಕುಮಾರ್ ಮತ್ತು ಅವರ ಸಂಗಡಿಗರೂ ಹೊಸಪೇಟೆ ನಗರದ ಜೋಳದ ರಾಶಿ ಗುಡ್ಡವನ್ನ ಏರಿ ರಾತ್ರಿ ಇಡೀ ಕಾದು ಕುಳಿತು ಬೆಳಗ್ಗೆ ನಾಟಕದ ಟೆಂಟಗಳಿಗೆ ಮರಳಿದ್ದು ನೆನೆಯುತ್ತಾರೆ. 

ರಾಜ್ ಕುಮಾರ ಅವರಿಗೆ ಜವಾರಿ ಚಿಕನ್ ಊಟ ಅಚ್ಚು ಮೆಚ್ಚಂತೆ, ಹೌದು ಹೀಗಂತ ಈ ಮರಿಸ್ವಾಮಿಯ ಮುಂದೆ ಹೇಳಿಕೊಂಡಿದ್ದ ರಾಜ್ ಕುಮಾರ್,ಹೊಸಪೇಟೆ ನಗರದಲ್ಲಿ ನಾಟಕ ಪ್ರದರ್ಶನಕ್ಕೆ ಬಂದ ರಾಜ್ ಕುಮಾರ್ ಅವರಿಗೆ ಜವಾರಿ ಕೋಳಿ ಮಾಂಸದೂಟ ಸೇವನೆಮಾಡುವ ಆಸೆಯಾಗಿತ್ತಂತೆ, ಅದಕ್ಕಾಗಿ ಹೊಟೆಲ್ ಗೆ ಹೋಗೊದು ರಾಜಣ್ಣನಿ ಗೆ ಇಷ್ಟವಿರಲಿಲ್ಲ, ಯಾಕೆಂದ್ರೆ ಹೊಟೆಲ್ ಊಟವನ್ನ ರಾಜ್ ಕುಮಾರ್ ಗೆ ಅಷ್ಟೊಂದು ಇಷ್ಟಪಡುತಿರಲಿಲ್ಲ, ವಿಷಯ ತಿಳಿದ ಮರಿಸ್ವಾಮಿ ಸೋಮುವಾರ ದಿನದಂದು ಮನೆಯಲ್ಲಿ ಜವಾರಿ ಕೋಳಿಯ ಊಟ ತಯಾರಿಸಿ ನಾಟಕ ಕಂಪನಿಯ ಎಂಟು ಜನರನ್ನ ಮನೆಗೆ ಊಟಕ್ಕೆ ಕರೆದಿದ್ದರಂತೆ. ರಾಜಕುಮಾರ್ ಜೊತೆ ನರಸಿಂಹರಾಜು ಬಾಲರಾಜು ಸೇರಿದಂತೆ ಎಂಟು ಜನ ಕಲಾವಿದರು ಅಂದಿಗೆ ಈ ಮರಿಸ್ವಾಮಿಯವರ ಮನೆಯಲ್ಲಿ ತ್ರುಪ್ತಿಯಾಗಿ ಊಟಮಾಡಿದ ನೆನಪುಗಳನ್ನ ಬಿಚ್ಚಿಡುತ್ತಾರೆ. 

ಇನ್ನು ಹೊಸಪೇಟೆ ನಗರಕ್ಕೂ ವಿಜಯನಗರ ಸಾಮ್ರಾಜ್ಯಕ್ಕೂ ಹೇಗೆ ಸಂಭಂದವಿದೆಯೋ ಹಾಗೆ ರಾಜ್ ಕುಮಾರ್ ಅಭಿನಯದ ನಾಟಕ ಮತ್ತು ಚಿತ್ರಗಳಿಗೆ ಹೊಸಪೇಟೆ ನಗರದಲ್ಲಿ ತುಂಬಾ ಬೇಡಿಕೆ ಅಂದಿಗೇ ಹೆಚ್ಚು ಇತ್ತು, ಅದರಲ್ಲೂ ಬೇಡರ ಕಣ್ಣಪ್ಪ ಸಿನಿಮಾಗೆ ಹೆಚ್ಚು ಅಭಿಮಾನಿಗಳು ಹುಟ್ಟಿಕೊಂಡಿದ್ದು ಇದೇ ನಗರದಲ್ಲಿ, ಅಷ್ಟೆ ಅಲ್ಲ ನಾಟಕದಲ್ಲಿ ಅಭಿನಯಿಸುವ ಸಂದರ್ಭದಲ್ಲಿ ರಾಜಕುಮಾರ್ ವಾಸ್ತವ್ಯ ಮಾಡಿದ್ದು  ಮ್ಯಾಸಕೇರಿಯ ದೇವಸ್ಥಾನದ ಪಕ್ಕದಲ್ಲಿ, ಹಾಗಾಗಿ ರಾಜ್ ಕುಮಾರ್ ಮತ್ತು ಹೊಸಪೇಟೆ ನಗರದ ನಡುವೆ ಅವಿನಾಭಾವಸಂಭಂದ ಇತ್ತು ಎನ್ನುವುದನ್ನ ತೋರಿಸುತ್ತೆ,

ಇನ್ನು ಇದೇ ರಾಜ್ ಮೇಲಿನ ಅಭಿಮಾನ ಅವರ ಕಿರಿಯ ಮಗ ಅಪ್ಪು ಮೇಲೆ ಕೂಡ ಮುಂದುವರೆದಿದೆ, ಅಪ್ಪು ಅವರ ಯಾವುದೇ ಚಿತ್ರ ಹೊಸಪೇಟೆ ನಗರದಲ್ಲಿ ಬಿಡುಗಡೆಯಾದ್ರು ಈ ಹೊಸಪೇಟೆ ನಗರದಲ್ಲಿ ದೊಡ್ಡ ಸಂಭ್ರಮವೇ ಮನೆಮಾಡುತ್ತೆ, ನಾಳೆ ಚಿತ್ರ ಬಿಡುಗಡೆಯಾಗುತ್ತೆ ಎಂದೆ ಇಂದು ರಾತ್ರಿಯಿಂದಲೇ ಅಭಿಮಾನಿ ಯುವಕರು ಚಿತ್ರ ಮಂದಿರದ ಮುಂಬಾಗದಲ್ಲಿ ಜಮಾಯಿಸಿ ಬಿಡುತಿದ್ದರು, ಚಿತ್ರ ಬಿಡುಗಡೆ ವೇಳೆಯಲ್ಲಿ ತಡವಾಗಿದ್ದೇ ಆದ್ರೆ ಇಲ್ಲಿನ ಅಭಿಮಾನಿಗಳನ್ನ ನಿಯಂತ್ರಿಸುವುದು ಇಲ್ಲಿನ ಪೋಲಿಸರಿಗೆ ದೊಡ್ಡ ತಲೆನೋವಾಗುತಿತ್ತು ಎನ್ನುವುದನ್ನ ಕೂಡ ಮರೆಯುವಹಾಗಿಲ್ಲ. ನಗರದ ಒಂದೇ ಒಂದು ಚಿತ್ರಮಂದಿರದಲ್ಲಿ ಪುನಿತ್ ಅಭಿನಯದ ಚಿತ್ರ ಬಿಡುಗಡೆಯಾಗುತ್ತೆ ಎಂದ್ರೆ ನೂರಾರು ಪೋಲಿಸ್ ಸಿಬ್ಬಂದಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸಮಾಡಬೇಕಾಗುತ್ತೆ, ಇನ್ನು ಈ ಹಿಂದೆ ಬಿಡುಗಡೆಯಾದ ರಾಜಕುಮಾರ ಚಿತ್ರ ವೀಕ್ಷಣೆಗೆ ಬಂದ ಅಭಿಮಾನಿಗಳ ನಿಯಂತ್ರಿಸಲು ರಾತ್ರಿ ಇಡೀ ಪೋಲಿಸರು ಲಾಟಿ ಬೀಸಿದ್ರು ಅಭಿಮಾನಿಗಳು ಮಾತ್ರ ನಿಯಂತ್ರಣಕ್ಕ ಬಾರದೆ ಉದ್ರಿಕ್ತರಾಗಿದ್ದು ರಾಜ್ ಕುಟುಂಭದ ಮೇಲಿನ ಅಭಿಮಾನವನ್ನ ಎತ್ತಿ ತೋರಿಸುತ್ತೆ,

ವರದಿ.ಸುಬಾನಿ ಪಿಂಜಾರ್ ವಿಜಯನಗರ.