ವಿಜಯನಗರ ( ಹೊಸಪೇಟೆ )ಬೆಂಗಳೂರಿಂದ ಹಂಪಿಯ ಪ್ರವಾಸಕ್ಕೆ ಬಂದಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಇಂದು ಮಧ್ಯಾಹ್ನ ಹಂಪಿಯ ಪುರಂದರ ದಾಸರ ಮಂಟಪದ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ.18 ವರ್ಷದ ಹರೀಶ್ ಮತ್ತು ಜೀವ ನೀರಿನಲ್ಲಿ ಮುಳುಗಿ ಸಾವನಪ್ಪಿದ ಯುವಕರಾಗಿದ್ದಾರೆ.
ವಿಜಯ ವಿಠಲ ದೇವಸ್ಥಾನ ಮತ್ತು ಸಂಗೀತ ಮಂಟಪ ಹಾಗೂ ಕಲ್ಲಿನ ತೇರು ವೀಕ್ಷಣೆ ಮಾಡಿಕೊಂಡ ಎಂಟು ಜನ ಯುವಕರ ತಂಡ, ನಂತರ ಪುರಂದರ ಮಂಟಪದ ಬಳಿಯ ತುಂಗಭದ್ರ ನದಿಗೆ ಹೋಗಿದ್ದಾರೆ. ಪುರಂದರ ಮಂಟಪದಲ್ಲಿ ಕೆಲ ಹೊತ್ತು ವಿಶ್ರಾಂತಿ ಪಡೆದು ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿಗೆ ಇಳಿದು ಸ್ನಾನ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ನೀರಿನ ಆಳ ತಿಳಿಯದ ಇಬ್ಬರು ಯುವಕರು ನೀರಿಗೆ ಇಳಿಯುತ್ತಿದ್ದಂತೆ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ನೋಡ ನೋಡುತ್ತಿದ್ದಂತೆ ಕಣ್ಮರೆಯಾಗಿದ್ದಾರೆ.
ಜೊತೆಗೆ ಬಂದಿದ್ದ ಸ್ನೇಹಿತರು ಮತ್ತು ಸ್ಥಳೀಯರು ಹಾಗೂ ಹಂಪಿಯ ಪ್ರವಾಸಿ ಮಾರ್ಗದರ್ಶಿಗಳು ಯುವಕರನ್ನ ಕಾಪಾಡಲು ಮುಂದಾದರೂ ಪ್ರಯೋಜನವಾಗಲಿಲ್ಲ. ಇದೀಗ ಹಂಪಿಯ ಪ್ರವಾಸಿ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಹೊಸಪೇಟೆಯ ಅಗ್ನಿಶಾಮಕ ದಳ ಸಿಬ್ಬಂದಿಗಳು ಹಾಗೂ ಹೋಂ ಗಾರ್ಡ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಣ್ಮರೆಯಾಗಿರುವ ಯುವಕರ ಮೃತದೇಹ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.
ಇತ್ತ ಬೆಂಗಳೂರಿನಿಂದ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದ ಇನ್ನುಳಿದ ಯುವಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಹಂಪಿಯ ಪುರಂದರ ಬಂಟಪದ ಬಳಿ ಇರುವ ತುಂಗಭದ್ರ ನದಿಗೆ ಜನಸಾಮಾನ್ಯರು ಇಳಿದು ಸ್ಥಾನ ಮಾಡುವುದನ್ನು ನಿಷೇಧ ಮಾಡಲಾಗಿದೆ, ಕಾರಣ ಈ ಭಾಗದಲ್ಲಿ ನೀರಿನ ಆಳ ಎಷ್ಟಿದೆ, ಹೇಗಿದೆ ಎನ್ನುವುದು ಯಾವೊಬ್ಬರೂ ಸರಿಯಾದ ಮಾಹಿತಿ ಇರುವುದಿಲ್ಲ. ನಿರಂತರ ನೀರು ಹಾರಿದ ಕಾರಣ ನೀರಿನಲ್ಲಿ ಕಾಲಿಡುತ್ತಿದ್ದಂತೆ ಕಾಲು ಜಾರಿ ಆಳದ ಗುಂಡಿಗೆ ಬಿದ್ದು ಅನಾಹುತಗಳು ಸಂಭವಿಸುತ್ತವೆ. ಈ ಸಂಬಂಧ ಇಲ್ಲಿ ನೀರಿನಲ್ಲಿ ಈಜುವುದು ಅಪಾಯಕಾರಿ ಎಂದು ಸೂಚನಾ ಫಲಕವನ್ನು ಕೂಡ ಹಾಕಿ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಹೀಗಿದ್ದರೂ ಯುವಕರು ನೀರಿಗೆ ಇಳಿದು ಅಪಾಯವನ್ನ ಮೈಮೇಲೆ ಎಳೆದುಕೊಂಡಿದ್ದಾರೆ.