ಹೊಸಪೇಟೆ (ವಿಜಯನಗರ ) ಒಳಚರಂಡಿ, ರಸ್ತೆ ಮತ್ತು ವಿದ್ಯುತ್ ಕಾಮಗಾರಿಯ ನಕಲಿ ದಾಖಲೆ ಸಲ್ಲಿಕೆ: ಭಟ್ರಳ್ಳಿ ಬಿಜೆಪಿ ಕಚೇರಿ ಹತ್ತಿರದ ವಾಣಿಜ್ಯ ವಿನ್ಯಾಸದ (Layout) ಅನುಮೋದನೆ ರದ್ದುಗೊಳಿಸಿದ ಹುಡಾ. ಹೊಸಪೇಟೆ: ತಾಲೂಕಿನ ಮುದ್ಲಾಪುರ ಗ್ರಾಮದ ಸರ್ವೆ ನಂಬರ್ 64 ಮತ್ತು 66/4 ರಲ್ಲಿ (ಭಟ್ರಳ್ಳಿ ಹತ್ತಿರದ ಬಿಜೆಪಿ ಕಚೇರಿ ವ್ಯಾಪ್ತಿಯಲ್ಲಿ) ನಿರ್ಮಿಸಲು ಉದ್ದೇಶಿಸಿದ್ದ ವಾಣಿಜ್ಯ ವಿನ್ಯಾಸಕ್ಕೆ ನೀಡಲಾಗಿದ್ದ ಅಂತಿಮ ಅನುಮೋದನೆಯನ್ನು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರವು (HUDA) ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣದ ವಿವರ :
ಹೊಸಪೇಟೆ ತಾಲೂಕು ಮುದ್ಲಾಪುರ ಗ್ರಾಮದ ಸರ್ವೆ ನಂಬರ್ 64 ರಲ್ಲಿ 1.28 ಎಕರೆ ಮತ್ತು ಸರ್ವೆ ನಂಬರ್ 66/4 ರಲ್ಲಿ 0.41 ಎಕರೆ ಸೇರಿದಂತೆ ಒಟ್ಟು 1.69 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ವಾಣಿಜ್ಯ ವಿನ್ಯಾಸ ನಿರ್ಮಿಸಲು ಶ್ರೀಮತಿ ಲಕ್ಷ್ಮೀ ಸಿಂಗ್ ಮತ್ತು ಸಿದ್ದಾರ್ಥ ಸಿಂಗ್ ಎ. ಠಾಕೂರ್ ಅವರು ಪ್ರಾಧಿಕಾರದಿಂದ ಅಂತಿಮ ಅನುಮೋದನೆ ಪಡೆದಿದ್ದರು.


ನಕಲಿ ದಾಖಲೆಗಳ ಆರೋಪ:
ಈ ವಿನ್ಯಾಸಕ್ಕೆ ಅನುಮೋದನೆ ಪಡೆಯಲು ಮಾಲೀಕರು ಪ್ರಾಧಿಕಾರಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ದೂರುದಾರರಾದ ಶ್ರೀ ವೇಣುಗೋಪಾಲ್ ಅವರು ಆಕ್ಷೇಪಣೆ ಸಲ್ಲಿಸಿದ್ದರು.
ಮುಖ್ಯವಾಗಿ, ಲೇಔಟ್ ಅಭಿವೃದ್ಧಿಗೆ ಅತ್ಯಗತ್ಯವಾಗಿರುವ ಒಳಚರಂಡಿ (Drainage), ಕುಡಿಯುವ ನೀರು ಹಾಗೂ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಕಲಿ ಆಧಾರಗಳನ್ನು ನೀಡಿ ಅನುಮೋದನೆ ಪಡೆಯಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಜೆಸ್ಕಾಂ (GESCOM) ಇಲಾಖೆಯಿಂದ ವಿದ್ಯುತ್ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆಯೂ ಸುಳ್ಳು ದೃಢೀಕರಣ ಪತ್ರವನ್ನು ಸಲ್ಲಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪರಿಶೀಲನೆ ಮತ್ತು ಕ್ರಮ:
ದೂರಿನ ಅನ್ವಯ ಜೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು ದಾಖಲೆಗಳನ್ನು ಪರಿಶೀಲಿಸಿದ್ದು, ಸದರಿ ಲೇಔಟ್ನ ವಿದ್ಯುದೀಕರಣಕ್ಕಾಗಿ ಅಂದಾಜು ಪತ್ರಿಕೆ ಮತ್ತು ಮಂಜೂರಾತಿ ನೀಡಲಾಗಿದೆಯೇ ಹೊರತು, ಕಾಮಗಾರಿ ಪೂರ್ಣಗೊಂಡ ಬಗ್ಗೆ ಯಾವುದೇ ಪ್ರಮಾಣಪತ್ರ (Completion Certificate) ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ವಿವರಣೆ ನೀಡುವಂತೆ ವಿನ್ಯಾಸದ ಮಾಲೀಕರಿಗೆ ಪ್ರಾಧಿಕಾರವು ದಿನಾಂಕ 21.11.2025, 29.11.2025 ಮತ್ತು 16.12.2025 ರಂದು ಮೂರು ಬಾರಿ ನೋಟಿಸ್ ನೀಡಿದ್ದರೂ, ಮಾಲೀಕರಿಂದ ಯಾವುದೇ ಸಮಂಜಸವಾದ ಉತ್ತರ ಬಂದಿರುವುದಿಲ್ಲ.
ಅಂತಿಮ ಆದೇಶ:
ಒಳಚರಂಡಿ, ನೀರು, ರಸ್ತೆ ಮತ್ತು ವಿದ್ಯುತ್ ಸಂಪರ್ಕದಂತಹ ಮೂಲಭೂತ ಸೌಕರ್ಯಗಳ ಬಗ್ಗೆ ನಕಲಿ ದಾಖಲೆಗಳನ್ನು ನೀಡಿ ವಾಣಿಜ್ಯ ವಿನ್ಯಾಸದ ಅಂತಿಮ ಅನುಮೋದನೆ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ದಿನಾಂಕ 09.01.2026 ರಂದು ನಡೆದ ಪ್ರಾಧಿಕಾರದ ಸಭೆಯ ತೀರ್ಮಾನದಂತೆ, ಸದರಿ 1.69 ಎಕರೆ ಜಮೀನಿನ ವಿನ್ಯಾಸದ ಅನುಮೋದನೆಯನ್ನು ರದ್ದುಪಡಿಸಲಾಗಿದೆ. ಮುಂದಿನ ಕ್ರಮಕ್ಕಾಗಿ ಆದೇಶದ ಪ್ರತಿಯನ್ನು ನಗರಸಭೆ ಪೌರಾಯುಕ್ತರು ಹಾಗೂ ಉಪನೋಂದಣಾಧಿಕಾರಿಗಳಿಗೆ (Sub-Registrar) ರವಾನಿಸಲಾಗಿದೆ ಎಂದು ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
