You are currently viewing ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕೋತ್ಸವ ಸಂಪನ್ನ<br>ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪಾರಾಕ್.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಾರ್ಣಿಕೋತ್ಸವ ಸಂಪನ್ನ
ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪಾರಾಕ್.

  • Post category:Uncategorized

ಹೊಸಪೇಟೆ. ವಿಜಯನಗರ ಜಿಲ್ಲಾಡಳಿತ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಸಂಜೆ 5.30ಕ್ಕೆ ಮೈಲಾರ ಗ್ರಾಮದಲ್ಲಿ ನಡೆದ ಕಾರ್ಣಿಕೋತ್ಸವ ಕಾರ್ಯಕ್ರಮ ಸಂಪನ್ನವಾಗಿ ನೆರವೇರಿತು.
ಮಂಗಳವಾರ ಸಂಜೆ ವೇಳೆಯಲ್ಲಿ ದೇವಸ್ಥಾನದಿಂದ ಕಾರ್ಣಿಕೋತ್ಸವ ನಡೆಯುವ ಸ್ಥಳ ಡೆಂಕನ ಮರಡಿವರೆಗೂ ಧಾರ್ಮಿಕ ಪಟಗಳ ಸಮೇತ ವಿಶೇಷ ಮೆರವಣಿಗೆಯನ್ನು ಗೊರವಪ್ಪರೊಂದಿಗೆ ದೇವಸ್ಥಾನ ಸಮಿತಿಯವರು ಆಗಮಿಸಿದರು.


ಮಧ್ಯಾಹ್ನದಿಂದಲೇ ಡೆಂಕನ ಮರಡಿಯತ್ತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಧಾವಿಸಿದ್ದರು.
ಜಿಲ್ಲಾಡಳಿತ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿತ್ತು.
ವಿಶೇಷ ಪೊಲೀಸ್ ವ್ಯವಸ್ಥೆ, ಬಂದೋಬಸ್ತ್ ಸಹ ಏರ್ಪಡಿಸಲಾಗಿತ್ತು.ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತ ಶ್ರೀಗುರು ವೆಂಕಪ್ಪಯ್ಯ ಒಡೆಯರ್ ಕುದುರೆ ಮೇಲೆ ಮೆರವಣಿಗೆ ಮೂಲಕ ಡೆಂಕನಮರಡಿಗೆ ಆಗಮಿಸಿ ಪೂಜೆ ನೆರವೇರಿಸಿದರು.ವಾರ್ಷಿಕ ಕಾರ್ಣಿಕ ನುಡಿ ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್:


ಭಕ್ತಾದಿಗಳು ಹೆಗಲ ಮೇಲೆ ಬಿಲ್ಲನ್ನು ಹೊತ್ತು ತಂದು ಡೆಂಕನಮರಡಿಯಲ್ಲಿ ಏರಿಸಿದರು. ಕಾರ್ಣಿಕ ಭವಿಷ್ಯ ನುಡಿಯುವ ಗೊರವಪ್ಪ ರಾಮಣ್ಣ ಅವರು ಬಿಲ್ಲನ್ನು ಏರಿ ಆಕಾಶದೆಡೆಗೆ ಮೌನವಾಗಿ ದಿಟ್ಟಿಸಿ ಸದ್ದಲೇ ಎಂದು ಕೂಗಿ “ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್” ಎಂದು ಕಾರ್ಣಿಕ ನುಡಿದು ಬಿಲ್ಲನ್ನು ಕೈಬಿಟ್ಟರು.
ಈ ವರ್ಷ ಮಳೆ ಬೆಳೆ ಸಮೃದ್ಧಿಯಾಗಿ ಕೃಷಿ ಚಟುವಟಿಕೆಗಳಿಗೆ ಯಾವುದೇ ಲೋಪದೋಷ ಉಂಟಾಗುವುದಿಲ್ಲ ಎಂದು ವಾರ್ಷಿಕ ಕಾರ್ಣಿಕದ ತಾತ್ಪಾರ್ಯವಾಗಿದೆ. ಜಾತ್ರಾ ಮಹೋತ್ಸವಕ್ಕೆ ಸುಗಮ ವ್ಯವಸ್ಥೆ:

ಡಿಸಿ ವೆಂಕಟೇಶ್
ಜಿಲ್ಲಾಧಿಕಾರಿ ವೆಂಕಟೇಶ್ ಟಿ. ಕಾರ್ಣಿಕೋತ್ಸವದ ಸಿದ್ಧತೆಯನ್ನು ಪರಿಶೀಲಿಸಿ ಮಾತನಾಡಿದ ಅವರು 6-7 ಲಕ್ಷ ಜನ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿಂದ ಅಗತ್ಯ ಸಿದ್ಧತೆಯನ್ನು ಕೈಗೊಳ್ಳಲಾಗಿದೆ.ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸಿ ಯಾವುದೇ ರೀತಿಯಾದ ತೊಂದರೆಯುಂಟಾಗದಂತೆ ನಿಗಾ ವಹಿಸಲಾಗಿದೆ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಮಾತನಾಡಿ ಜ.28ರಿಂದ ಆರಂಭಗೊಂಡ ಜಾತ್ರಾ ಮಹೋತ್ಸವಕ್ಕೆ ಸುಗಮ ಸಂಚಾರಕ್ಕೆ ಅನುವು ಸೇರಿದಂತೆ, ಸೂಕ್ತ ಭದ್ರತೆ,

ಪಾರ್ಕಿಂಗ್ ವ್ಯವಸ್ಥೆ ಸಲುವಾಗಿ 650 ಪೊಲೀಸ್ ಸಿಬ್ಬಂದಿ ಸೇರಿದಂತೆ 5 ಕೆಎಸ್‌ಆರ್‌ಪಿ ತುಕಡಿ, 4 ಜನ ಡಿವೈಎಸ್ಪಿ, 9 ಜನ ಇನ್ಸ್‌ಪೆಕ್ಟರ್, 21 ಜನ ಸಬ್ ಇನ್ಸ್‌ಪೆಕ್ಟರ್ ನಿಯೋಜನೆಗೊಂಡಿದ್ದರು. ಕಾರ್ಣಿಕೋತ್ಸವ ನಂತರವೂ ಮೂರು ದಿನಗಳ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮತದಾನದ ಕುರಿತು ಅರಿವು:ಕಾರ್ಣಿಕೋತ್ಸವ ನಡೆಯುವ ಸ್ಥಳ ಡೆಂಕನ ಮರಡಿಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತದಾನದ ಕುರಿತು ಜಾಗೃತಿ ಹಾಗೂ ಅರಿವನ್ನು ಧ್ವನಿವರ್ಧಕದ ಮೂಲಕ ಭಕ್ತರಿಗೆ ನೀಡಲಾಯಿತು.ಆರೋಗ್ಯ ಇಲಾಖೆ, ಜೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಣಿಕೋತ್ಸವ ಸ್ಥಳದಲ್ಲಿ ಉಪಸ್ಥಿತಿ ವಹಿಸಿದ್ದರು.


ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಸಂಸದ ದೇವೇಂದ್ರಪ್ಪ, ಐಜಿ ಲೋಕೇಶ್ ಕುಮಾರ್, ಹೂವಿನಹಡಗಲಿ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ತಹಶೀಲ್ದಾರ್ ಶರಣಮ್ಮ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಚ್.ಎಂ.ಪ್ರಕಾಶ್, ರಾವ್, ಮೈಲಾರಲಿಂಗ ಸ್ವಾಮಿ ದೇವಸ್ಥಾನದ ಕೃಷ್ಣಪ್ಪ ಬಿ.ಎಂ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.