ದಾವಣಗೇರೆ….ನಕಲಿ ಬಂಗಾರವನ್ನ ಅಸಲಿ ಎಂದು ನಂಬಿಸಿ ಮಾರಾಟಮಾಡುತಿದ್ದ ವಂಚಕನನ್ನ ಬಂದಿಸುವಲ್ಲಿ ದಾವಣಗೆರೆ ಡಿಸಿಆರ್ಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 22 ಲಕ್ಷ ರೂ ನಗದು ವಶಕಕ್ಕೆ ಪಡೆದಿರುವ ಪೊಲೀಸರು ಇನ್ನೂ ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.
ದಾವಣಗೆರೆ ನಗರದ ಗಿರೀಶ್ ಬಂಧಿತ ಆರೋಪಿ ಯಾಗಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಕೇರಳ ಮೂಲದ ವ್ಯಕ್ತಿಗೆ ಪೊನ್ ಕರೆ ಮಾಡಿ ನನ್ನ ಬಳಿ ಬ್ರಿಟೀಷ್ ಕಾಲದ ಬಂಗಾರದ ನಾಣ್ಯಗಳಿವೆ, ಅವುಗಳನ್ನ ಬಹಿರಂಗವಾಗಿ ಮಾರಾಟಮಾಡುವುದು ಕಷ್ಟ, ನೀವು ಬಂದರೆ ನಿಮಗೆ ಕಡಿಮೆ ಬೆಲೆಯಲ್ಲಿ ಎಲ್ಲಾ ನಾಣ್ಯಗಳನ್ನ ಕೊಡುವುದಾಗಿ ನಂಬಿಸಿದ್ದ, ಅದರಂತೆ ಒಂದು ಅಸಲಿ ಬಂಗಾರದ ನಾಣ್ಯವನ್ನ ಸಹ ಸ್ಯಾಂಪಲ್ ಕೊಟ್ಟು ನಂಬಿಸಿದ್ದ.
ವಂಚಕನ ಬಳಿ ಇರುವ ನಕಲಿ ನಾಣ್ಯಗಳನ್ನ ಅಸಲಿ ಎಂದು ನಂಬಿದ ಕೇರಳಿಗ ಮುವತ್ತು ಲಕ್ಷ ನಗದು ಸಮೇತ ನಗರದ ಪಿಬಿ ರಸ್ತೆಯಲ್ಲಿರುವ ಟೊಯೊಟ ಷೋ ರೂಂ ಬಳಿ ಬಂದು ಅಸಲಿ ಹಣ ಕೊಟ್ಟು ನಕಲಿ ಬಂಗಾರ ನಾಣ್ಯಗಳನ್ನ ಪಡೆದಿದ್ದ.
ಇದಾದ ಬಳಿಕ ಮನೆಗೆ ಹೋಗಿ ಎಲ್ಲಾ ನಾಣ್ಯಗಳನ್ನ ಪರೀಕ್ಷೆಗೆ ಒಳಪಡಿಸಿದಾಗ ತನಗೆ ಮೊಸ ಆಗಿರುವುದು ಅರಿವಾಗಿದೆ. ಹಾಗಾಗಿ ಈ ಸಂಬಂಧ ದಾವಣಗೇರೆ ಗಾಂಧಿನಗರ ಪೊಲೀಸ್ ಠಾಣೆಗೆ ಹೋಗಿ ವಂಚಕನ ವಿರುದ್ದ ದೂರು ನೀಡಿ ಪತ್ತೆ ಹಚ್ಚುವಂತೆ ಮನವಿ ಮಾಡಿಕೊಂಡಿದ್ದ. ಪ್ರಕರಣ ದಾಖಲಾಗಿ 7 ತಿಂಗಳು ಕಳೆದರೂ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಡಿಸಿಆರ್ಬಿ ವರ್ಗಾಯಿಸಲಾಗಿತ್ತು.
ಈ ನಿಟ್ಟಿನಲ್ಲಿ ಡಿವೈಎಸ್ಪಿ ಬಿ.ಎಸ್.ಬಸವರಾಜ್ ನೇತೃತ್ವದ ತನಿಖಾ ತಂಡ ಬೆಂಗಳೂರು, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಿ ಆರೋಪಿತರ ಮಾಹಿತಿ ಕಲೆಹಾಕಿ, ಕೊನೆಗೆ ದಾವಣಗೇರಿ ನಗರದ ಗಿರೀಶ್ ಎಂಬಾತನನ್ನು ಬಂಧಿಸಿದ್ದಾರೆ.ಸದರಿ ಪ್ರಕರಣದಲ್ಲಿ ಬೇರೆ ಬೇರೆ ರಾಜ್ಯಗಳ ಇನ್ನೂ ಕೆಲವರು ಭಾಗಿಯಾಗಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರೆದಿದ್ದು, ಕಳೆದ ಒಂದು ವರ್ಷದ ಅವದಿಯಲ್ಲಿ ಇಂತದ್ದೇ 7 ರಿಂದ 8 ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ.
ದಾವಣಗೆರೆ, ಚಿತ್ರದುರ್ಗ, ವಿಜಯ ನಗರ ಜಿಲ್ಲೆಗಳ ಸುತ್ತ ಮುತ್ತ ಈ ರೀತಿಯ ಮೋಸದ ಜಾಲ ಹೆಚ್ಚಾಗಿದ್ದು. ಹರಪನಹಳ್ಳಿಯನ್ನ ಕೇಂದ್ರವಾಗಿಸಿಕೊಂಡ ವಂಚಕರ ತಂಡ ಕಾರ್ಯಾಚರಣೆ ಮಾಡುತ್ತಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಸ್ಷಷ್ಟಪಡಿಸಿದ್ದಾರೆ. ಅದಲ್ಲದೆ ಪ್ರಕರಣದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾದವರು ಅತೀ ಶೀಘ್ರದಲ್ಲೇ ಹೊರ ಬಂದು ಮತ್ತೆ ಇಂತದ್ದೇ ದಂಧೆಯಲ್ಲಿ ತೊಡಗುತ್ತಿರುವುದು ಹೆಚ್ಚಾಗುತ್ತಿದೆ. ಆದ್ದರಿಂದ ಜನರಲ್ಲಿ ಜಾಗೃತಿ ಬರುವ ವರೆಗೆ ಇಂತಾ ಪ್ರಕರಣಗಳು ಸರ್ವೇ ಸಾಮಾನ್ಯವಾಗಿ ನಡೆಯುತ್ತಲೆ ಇರುತ್ತವೆ ಎಂದಿದ್ದಾರೆ.