ವಿಜಯನಗರ…ಹೌದು ಇತ್ತೀಚೆಗೆ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಎತ್ತಿನ ಬಂಡಿಗಳ ಬಳಕೆ ಸರ್ವೇ ಸಾಮಾನ್ಯವಾಗಿದೆ. ತಾಲೂಕಿನ ಉದ್ದಗಲಕ್ಕೂ ಹರಿದಿರುವ ತುಂಗಭದ್ರ ನದಿ ಒಡಲಗೆ ಖನ್ನ ಹಾಕುವ ಅಕ್ರಮ ಕುಳಗಳು, ನದಿಯಿಂದ ಮರಳು ಸಾಗಾಟಕ್ಕೆ ಎತ್ತಿನ ಬಂಡಿ ಬಳಕೆಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ.
ಟ್ರಾಕ್ಟರ್ ಮತ್ತು ಲಾರಿ ಬಳಕೆ ಮಾಡಿದರೆ ಪೊಲೀಸರ ಕಾಟ ಹೆಚ್ಚೆಂದು ತಿಳಿದ ಅಕ್ರಮ ಮರಳು ದಂದೆ ಕೋರರು, ಎತ್ತಿನ ಬಂಡಿ ಇರುವ ಸಣ್ಣ ಪುಟ್ಟ ರೈತರಿಗೆ ಗಾಳ ಹಾಕಿ ನದಿಯಿಂದ ಮರಳನ್ನ ತಂದು ನದಿ ಪಕ್ಕದ ಜಮೀನು ಅಥವಾ ಗ್ರಾಮಗಳ ಅವರ ಮನೆಯ ಮುಂದೆ ಸಂಗ್ರಹಿಸಿಕೊಳ್ಳಲು ಸೂಚಿಸುತ್ತಾರೆ.
ಹೀಗೆ ಎತ್ತಿನ ಬಂಡಿಯಿಂದ ಮರಳನ್ನ ತಂದು ತಮ್ಮ ಮನೆ ಅಥವಾ ಜಮೀನಿನಲ್ಲಿ ರೈತರು ಸಂಗ್ರಹಮಾಡುತಿದ್ದಂತೆ ಸ್ಥಳಕ್ಕೆ ಬೇಟಿ ಕೊಡುವ ಅಕ್ರಮ ಮರಳು ದಂದೆ ಕೋರರು ಟ್ರಾಕ್ಟರ್ ಅಥವಾ ಲಾರಿಯಲ್ಲಿ ಮರಳನ್ನ ತುಂಬಿ ರಾತ್ರೋ ರಾತ್ರಿ ಆ ಮರಳನ್ನ ನಗರ ಪಟ್ಟಣ ಪ್ರದೇಶಗಳಿಗೆ ಸಾಗಾಟಮಾಡಿ ಹಣ ಮಾಡುವ ದಂದೆಗೆ ನಿಂತಿದ್ದಾರೆ.
ತಾಲೂಕಿನ ಹರಿವಿ, ಮೈಲಾರ ಗ್ರಾಮಗಳಲ್ಲಿ ರಾತ್ರಿ ಪೂರ್ತಿ ಎತ್ತಿನ ಬಂಡಿಗಳಲ್ಲಿ ಮರಳು ಸಾಗಾಟಮಾಡುವ ದೃಷ್ಯಗಳು ಸರ್ವೇ ಸಾಮಾನ್ಯವಾಗಿದ್ದರೆ. ಇತ್ತ ಮದಲಗಟ್ಟಿ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹರಿದಿರುವ ತುಂಗಭದ್ರ ನದಿಯಲ್ಲಿ ಹಾಡ ಹಗಲೇ ಎತ್ತಿನ ಬಂಡಿ ಮೂಲಕ ಮರಳು ಸಾಗಾಟ ರಾಜಾರೋಷವಾಗಿ ನಡೆದಿದೆ.
ಇನ್ನು ಈ ಹಿಂದೆ ಎತ್ತಿನ ಬಂಡಿ ಮೂಲಕ ಮರಳು ಸಾಗಾಟಕ್ಕೆ ಅವಕಾಶ ಕಲ್ಪಿಸಿದ್ದರು ಇಲ್ಲಿನ ಅಧಿಕಾರಿಗಳು. ಕಾರಣ ನದಿ ದಡದ ಬಡ ಜನಗಳು ತಮ್ಮ ಮನೆ ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗಲೆಂದು. ಆದರೆ ಇದೇ ಅವಕಾಶವನ್ನ ದುರ್ಬಳಕೆ ಬಳಕೆಮಾಡಿಕೊಂಡ ಅಕ್ರಮ ಕುಳಗಳು, ಸ್ವಂತಕ್ಕೆ ಮರಳನ್ನ ಬಳಕೆಮಾಡಿಕೊಳ್ಳುವ ಬಡ ಜನಗಳಿಗೆ ಹಣದ ವ್ಯಾಮೋಹ ತೋರಿಸಿ ಅಕ್ರಮ ಮರಳುಗಾರಿಕೆಗೆ ಇಳಿಸಿದ್ದಾರೆ.
ಹಣದ ವ್ಯಾಮೋಹಕ್ಕೆ ಬಿದ್ದ ಕೆಲವು ಸಣ್ಣ ಪುಟ್ಟ ರೈತರು ನದಿಯಲ್ಲಿ ಎತ್ತಿನ ಬಂಡಿ ಇಳಿಸಿ ಮರಳನ್ನ ತುಂಬಿ ಸಾಗಾಟಮಾಡಲು ಮುಂದಾಗುತಿದ್ದಾರೆ, ಒಂದು ವೇಳೆ ನದಿಯಿಂದ ಎತ್ತುಗಳು ಮೇಲೆ ಬರಲು ಆಗದಿದ್ದರೆ ಅವುಗಳನ್ನ ಹೊಡೆದು ಹಿಂಸಿಸಿ ನದಿಯಿಂದ ಮರಳನ್ನ ಮೇಲಕ್ಕೆ ತರುವ ಪ್ರಯತ್ನವನ್ನ ಮಾಡುತಿರುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ.
ಸಂಭಂದ ಪಟ್ಟ ಇಲಾಖೆಗಳು ಈ ಕಣ್ಣಾ ಮುಚ್ಚಾಲೆ ಆಟಕ್ಕೆ ಬ್ರೇಕ್ ಹಾಕುವ ಮೂಲಕ ಮೂಕ ಪ್ರಾಣಿಗಳ ಮೇಲೆ ನಡೆಯುವ ಹಿಂಸೆಯನ್ನ ತಡೆಯಬೇಕಿದೆ. ಅದರಲ್ಲೂ ಹಿರೇಹಡಗಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎತ್ತಿನ ಬಂಡಿಗಳ ಮೂಲಕ ಮಾಡುವ ಮರಳು ಸಾಗಾಟ ಹೆಚ್ಚಾಗಿದ್ದು ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕಿದೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.