You are currently viewing ವಿಮ್ಸ್ ನಲ್ಲಿ ಸಾವುಗಳ ಪ್ರಕರಣ:ಆರೋಗ್ಯ ಸಚಿವ ಸುಧಾಕರ್ ಅವರಿಂದ ವಿಮ್ಸ್ ನಲ್ಲಿ ಸಭೆ,ತನಿಖಾ ವರದಿ ಅನುಸಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ:

ವಿಮ್ಸ್ ನಲ್ಲಿ ಸಾವುಗಳ ಪ್ರಕರಣ:ಆರೋಗ್ಯ ಸಚಿವ ಸುಧಾಕರ್ ಅವರಿಂದ ವಿಮ್ಸ್ ನಲ್ಲಿ ಸಭೆ,ತನಿಖಾ ವರದಿ ಅನುಸಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ:

ಬಳ್ಳಾರಿ, ವಿಮ್ಸ್ ನಲ್ಲಿ ಇತ್ತೀಚೆಗೆ ಸಂಭವಿಸಿದ ಎರಡು ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ‌ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ‌ಸಚಿವರಾದ ಡಾ.ಕೆ.ಸುಧಾಕರ್ ಅವರು ಭಾನುವಾರ ವಿಮ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯುತ್ ಕೇಬಲ್ ಬ್ಲಾಸ್ಟ್ ಆಗಿರುವ ಸ್ಥಳ, ವಿದ್ಯುತ್ ಪೂರೈಕೆಯಾಗುವ ಜರ್ನೆಟರ್, ಎಂಐಸಿಯುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು ಮತ್ತು ಅಧಿಕಾರಿಗಳಿಂದ ಅಗತ್ಯ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಪಡೆದುಕೊಂಡರು.
ಆರೋಗ್ಯ ‌ಸಚಿವ ಡಾ.ಸುಧಾಕರ್ ಅವರಿಗೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು,ಡಿಸಿ ಪವನಕುಮಾರ್ ಮಾಲಪಾಟಿ, ಎಸ್ಪಿ ಸೈದುಲು ಅಡಾವತ್,ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಡಾ.ಸುಜಾತಾ,ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರು ಸಾಥ್ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಸೆ.14ರಂದು ಬೆಳಗ್ಗೆ 8:20ರಿಂದ 9:30ರವರೆಗೆ ವಿದ್ಯುತ್ ಕಡಿತವಾಗಿರುವುದು ನಿಜ; ಆದರೇ ಅಂದು ವೆಂಟಿಲೇಟರ್ ನಲ್ಲಿದ್ದ ಮೌಲಾ ಹುಸೇನ್ ಮತ್ತು ಚೆಟ್ಟೆಮ್ಮ ಅವರ ಸಾವಿಗೆ ವಿದ್ಯುತ್ ಕಡಿತ ಕಾರಣವಲ್ಲ.
ಕಿಡ್ನಿ ವೈಫಲ್ಯದಿಂದ‌‌ ಬಳಲುತ್ತಿದ್ದ ಮೌಲಾಹುಸೇನ್(35),
ವಿಷಕಾರಿ‌ ಹಾವು ಕಡಿತದಿಂದ ವಿಮ್ಸ್ ಗೆ ದಾಖಲಾಗಿದ್ದ ಚೆಟ್ಟೆಮ್ಮ(30)ಎನ್ನುವವರ ಆರೋಗ್ಯದ ಸ್ಥಿತಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿಯೇ ಗಂಭೀರವಾಗಿತ್ತು;ಅವರಿಗೆ ಗುಣಮಟ್ಟದ‌ ಚಿಕಿತ್ಸೆ ನೀಡಿದಾಗಿಯೂ ಆರೋಗ್ಯದಲ್ಲಿ‌ ಸುಧಾರಣೆಯಾಗದೇ ಸಾವನ್ನಪ್ಪಿದ್ದಾರೆ ಎಂದು ವಿಮ್ಸ್ ನ ಆಡಳಿತ ಮಂಡಳಿ ಮತ್ತು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು.


ಈ ಘಟನೆಗೆ ಸಂಬಂಧಿಸಿದಂತೆ ಕೂಲಂಕುಷವಾಗಿ ತನಿಖೆ ನಡೆಸುವ ನಿಟ್ಟಿನಲ್ಲಿ ಸರಕಾರ ಈಗಾಗಲೇ ತನಿಖಾ ಸಮಿತಿಯೊಂದನ್ನು ರಚಿಸಿದ್ದು,ಸದರಿ ಸಮಿತಿ ಈಗಾಗಲೇ ಒಂದು ಬಾರಿ ಭೇಟಿ ನೀಡಿ ಪರಿಶೀಲಿಸಿ ಹೋಗಿದೆ;ಜೆಸ್ಕಾಂ ಎಂಜಿನಿಯರ್ ಒಬ್ಬರ ಅವಶ್ಯವಿದ್ದು,ಸಮಿತಿಯಲ್ಲಿ ಅವಕಾಶ ನೀಡುವಂತೆ ಸಮಿತಿಯು ಕೋರಿದ್ದು,ಜೆಸ್ಕಾಂ ಎಂಜಿನಿಯರ್ ಒಬ್ಬರನ್ನು ಒದಗಿಸಲಾಗುವುದು. ಸಮಿತಿಯು ಶೀಘ್ರ ವರದಿ ಸಲ್ಲಿಸಲಿದೆ‌ ಎಂದು ವಿವರಿಸಿದ ಸಚಿವ ಡಾ.ಸುಧಾಕರ್ ಅವರು ತನಿಖಾ ಸಮಿತಿ ವರದಿ ಅನುಸಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ವಿಮ್ಸ್ ನಲ್ಲಿ ಉತ್ಕೃಷ್ಟ ಮಟ್ಟದ ಹಾಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗುವ ನಿಟ್ಟಿನಲ್ಲಿ ವಿಮ್ಸ್ ನಿರ್ದೇಶಕರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ತಜ್ಞ ವೈದ್ಯರ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.


ವಿಮ್ಸ್ ನಿರ್ದೇಶಕರ ನೇಮಕಾತಿಯು ನಿಯಮಾನುಸಾರ ಮತ್ತು ಪಾರದರ್ಶಕವಾಗಿ ನಡೆದಿದೆ ಎಂದು ಸ್ಪಷ್ಟಪಡಿಸಿದ ಸಚಿವ ಡಾ.ಸುಧಾಕರ್ ಅವರು ಸರಕಾರಿ ವೈದ್ಯರು ತಮ್ಮ ಕರ್ತವ್ಯದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ ಗಳಲ್ಲಿ ಚಿಕಿತ್ಸೆ ನೀಡುವ ಖಾಸಗಿ ಕ್ಲಿನಿಕ್ ನಡೆಸುವ ವಿಷಯದಲ್ಲಿ ಬಿಗಿಯಾದ ಕಾನೂನುಕ್ರಮಗಳನ್ನು ಶೀಘ್ರ ಕೈಗೊಳ್ಳಲಾಗುವುದು ಎಂದರು.

ವಿಮ್ಸ್ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಮ್ಸ್ ನಿರ್ದೇಶಕರಿಗೆ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಆರೋಗ್ಯ ಸಚಿವ ಡಾ.ಸುಧಾಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ನೀಡಿದರು.