ಬೆಂಗಳೂರು….ಶಬ್ಧಮಾಲಿನ್ಯ ದುಷ್ಪರಿಣಾಮಗಳ
ಬೆಂಗಳೂರು: ದೇಶದ ಪರಿಸರ ಮತ್ತು ಮಾನವನ ಆರೋಗ್ಯವನ್ನು ಕಾಡುತ್ತಿರುವ ಮಾಲಿನ್ಯಗಳಲ್ಲಿ ಶಬ್ಧ ಮಾಲಿನ್ಯ ಒಂದು.ದೇಶದ ಅತ್ಯಂತ ಶಬ್ದಮಾಲಿನ್ಯಕಾರಕ ನಗರಗಳಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಕೂಡ ಸ್ಥಾನ ಪಡೆದಿದೆ ಎನ್ನೋದು ಆತಂಕದ ವಿಚಾರ.
ಅಂದ್ಹಾಗೆ ಶಬ್ದ ಮಾಲಿನ್ಯಕ್ಕೆ ಅತಿಯಾದ ವಾಹನ ದಟ್ಟಣೆ ಪ್ರಮುಖ ಕಾರಣ ಎನ್ನುವುದು ಈಗಾಗಲೇ ಸರ್ವೆಗಳಿಂದಲೇ ಸಾಬೀತಾಗಿದೆ.ವಾಹನಗಳ ಸಂಖ್ಯೆಯನ್ನು ಮೀರಿಸುವ ರೀತಿಯಲ್ಲಿ ವಾಹನಗಳು ಸಂಚರಿಸುತ್ತಿರುವುದರಿಂದ ಸಹಜವಾಗೇ “ಹಾರ್ನ್ ” ಮಾಡೋದನ್ನು ಕಾಣುತ್ತೇವೆ.
ಆದರೆ ಅದು ನಿಜಕ್ಕೂ ಅಗತ್ಯವಿದೆಯೇ..? ಖಂಡಿತಾ ಇಲ್ಲ..ಎಲ್ಲಿ ಹಾರ್ನ್ ಮಾಡಬೇಕು..ಎಷ್ಟು ಪ್ರಮಾಣದಲ್ಲಿ ಹಾರ್ನ್ ಮಾಡಬೇಕು..ಯಾವ್ ಸನ್ನಿವೇಶಗಳಲ್ಲಿ ಹಾರ್ನ್ ಮಾಡುವುದು ಅನಿವಾರ್ಯ ಎನ್ನುವುದಕ್ಕೆ ಅದರದೇ ಆದ ಮಾನದಂಡವಿದೆ.ಇದನ್ನು ತಿಳಿಸಿಕೊಡುವ ಪ್ರಯತ್ನಗಳು ನಮ್ಮಲ್ಲಿ ಸರ್ಕಾರ ಹಾಗೂ ಪರಿಸರಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಂತರ ನಡೆಯುತ್ತಲೇ ಬಂದಿದೆ.ಆದರೆ ಎಷ್ಟೇ ಜಾಗೃತಿ ಮೂಡಿಸಿದ್ರು ಹಾರ್ನ್ನ ದುಷ್ಪರಿಣಾಮಗಳ ಬಗ್ಗೆ ವಾಹನ ಚಾಲಕರು ಎಚ್ಚೆತ್ತುಕೊಳ್ಳುತ್ತಿಲ್ಲ.
ಹಾಗೆಂದಾಕ್ಷಣ ಜಾಗೃತಿ ಮೂಡಿಸುವ ಪ್ರಯತ್ನಗಳನ್ನು ಬಿಡಲು ಸಾಧ್ಯವೇ..? ಖಂಡಿತಾ ಇಲ್ಲ.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ವಾಹನ ಚಾಲಕರು,ಸವಾರರು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಲೇ ಬಂದಿದೆ.ಅದರ ಭಾಗವಾಗಿ ಬೆಂಗಳೂರಿನಲ್ಲಿಯೂ ವಿನೂತನ ರೀತಿಯ ಜಾಗೃತಿ ಕಾರ್ಯಕ್ರಮ ನಡೆಯಿತು.
ಶಬ್ದ ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಒಂದಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿನ ಸಾದಳ್ಳಿ ಗೇಟ್ ಬಳಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಟಿಎಸ್ ಪಿ ಕನ್ಸಲ್ಟೆನ್ಸಿ ಸಂಸ್ಥೆಗಳ ಸಹಯೋಗದಲ್ಲಿ ಹಾರ್ನ್ ಮಾಡಿ..ಮಾಲಿನ್ಯಕ್ಕೆ ಕಾರಣವಾಗಬೇಡಿ ಎಂಬ ಶೀರ್ಷಿಕೆ ಅಡಿಯಲ್ಲಿ ಅಭಿಯಾನ ನಡೆಯಿತು.
ರೇವಾ ಕಾಲೇಜ್ ,ಯಲಹಂಕ ಸರ್ಕಾರಿ ಕಾಲೇಜಿನ ಎನ್ ಸಿಸಿ ಕೆಡೆಟ್ ಗಳು ಸದಾ ವಾಹನದಟ್ಟಣೆಯಿಂದ ಕೂಡಿರೋ ಈ ಟೋಲ್ ನಲ್ಲಿ ಕೈಯಲ್ಲಿ ಪ್ಲಕಾರ್ಡ್ ಗಳನ್ನು ಹಿಡಿದು, ವಾಹನ ಚಾಲಕರಿಗೆ ಗುಲಾಬಿ ಹೂವನ್ನು ನೀಡುವ ಮೂಲಕ ಹಾರ್ನ್ ಹಾಗೂ ಅದರಿಂದ ಉಂಟಾಗುವ ಶಬ್ಧ ಮಾಲಿನ್ಯ ಹಾಗೂ ಅದು ಉಂಟುಮಾಡುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಅವಶ್ಯಕತೆ ಇದ್ದರಷ್ಟೆ ಹಾರ್ನ್ ಮಾಡಿ,ಇಲ್ಲದಿದ್ದರೆ ಸುಮ್ಮನಿದ್ದು ಪರಿಸರ ಕಾಪಾಡಿ,ಇತರ ವಾಹನ ಚಾಲಕರ ಕಾಳಜಿ ಮಾಡಿ ಎನ್ನುವ ಮಾರ್ಮಿಕವಾದ ಸಂದೇಶ ವನ್ನು ವಿದ್ಯಾರ್ಥಿಗಳು ಅಭಿಯಾನದ ಮೂಲಕ ನೀಡಿದ್ರು.ಇಂತದ್ದೊಂದು ಅಭಿಯಾನಕ್ಕೆ ಅವಕಾಶ ಮಾಡಿಕೊಟ್ಟ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಟಿಎಸ್ ಪಿ ಕನ್ಸಲ್ಟೆನ್ಸಿ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದ್ರು.
ಇನ್ನು ಶಬ್ಧ ಮಾಲಿನ್ಯದಿಂದ ವಾಹನ ಚಾಲಕರು ದಿನನಿತ್ಯ ಹಾರ್ನ್ ನಿಂದ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಇನ್ನಷ್ಟು ಜಾಗೃತಿ ನಡೀಬೇಕು.ನೋ ಹಾಂಕ್ ಡೇ ಎನ್ನೋದಿದ್ರೂ ವಾಹನ ಸವಾರರು ಅದಕ್ಕೆ ತಲೆಕೆಡಿಸಿಕೊಳ್ತಿಲ್ಲ.ಇದಕ್ಕೆಂದೇ ಇರುವ ಕಾನೂನು ಬಲವಾಗಬೇಕೆಂದು ವಾಹನ ಚಾಲಕರು ಹಾಗೂ ನಾಗರಿಕರು ತಿಳಿಸಿದರು.
ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್, ವಂದೇ ಮಾತರಂ ಸಂಘಟನೆಯ ರಾಜ್ಯಾ ಧ್ಯಕ್ಷ ಶಿವಕುಮಾರ ನಾಯ್ಕ,ಹಿಂದೂಪರ ಸಂಘಟನೆ ಮುಖಂಡ ಭರತ್ ಶೆಟ್ಟಿ ಸೇರಿದಂತೆ ಹಲವರು ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಉದ್ದೇಶವನ್ನು ಪ್ರಶಂಶಿಸಿದರು.ಟೋಲ್ ನ ಮೇಲುಸ್ತುವಾರಿಯಾದ ದುರ್ಗಾರಾವ್,ಸಂಜೀವ್ ಕುಮಾರ್, ಇಂಥಾ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು,ಈ ನಿಟ್ಟಿನಲ್ಲಿ ಟಿಎಸ್ ಪಿ ಕನ್ಸಲ್ಟೆಂಟ್ ಅಂಡ್ ಪಬ್ಲಿಸಿಟಿ ಸಂಸ್ಥೆಯ ಅಭಿಯಾನ ಇತರರಿಗೂ ಮಾದರಿಯಾಗಲಿ ಎಂದು ಆಶಿಸಿದರು.
ಅಭಿಯಾನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಎನ್ ಸಿಸಿ ಸಂಯೋಜಕರಾದ ಮುನೇಗೌಡ, ಶಶಿಕುಮಾರ್ ಅವರು ಅಭಿನಂದನಾ ಪತ್ರ ನೀಡಿದರು.ಟಿಎಸ್ ಪಿ ಕನ್ಸಲ್ಟೆಂಟ್ ಅಂಡ್ ಪಬ್ಲಿಸಿಟಿ ಸಂಸ್ಥೆಯ ಪ್ರಸನ್ನಕುಮಾರ್ ಹಾಜರಿದ್ದರು.