ವಿಜಯನಗರ (ಹೊಸಪೇಟೆ).. ವಿಶ್ವ ವಿಖ್ಯಾತ ಹಂಪಿಯಲ್ಲಿ ನಿನ್ನೆ ಶ್ರೀಗಂಧ ಕಳ್ಳತನ ನಡೆದಿದೆ. ಹಂಪಿಯ ಕಮಲ ಮೆಹಲ್ ಆವರಣದಲ್ಲಿದ್ದ ಇಪ್ಪತ್ತು ವರ್ಷಗಳಷ್ಟು ಹಳೆಯದಾದ ಮರವನ್ನ ಕಡಿದ ಶ್ರೀಗಂಧ ಕಳ್ಳರು ರಾತ್ರೋ ರಾತ್ರಿ ಪರಾರಿಯಾಗಿದ್ದಾರೆ. ಈ ಸಂಬಂಧ ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಶ್ವ ವಿಖ್ಯಾತ ಹಂಪಿಯಲ್ಲಿ ನಡೆಯುವ ಕಳ್ಳತನ ಪ್ರಕರಣ ಇದೇ ಮೊದಲೆನಲ್ಲ, ಈ ಹಿಂದೆ ಕೂಡ ಸಾಕಷ್ಟು ಕಳ್ಳತನ ನಡೆದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. 2014/15ನೇ ಸಾಲಿನಲ್ಲಿ ಆಂಧ್ರ ಪ್ರದೇಶದಿಂದ ಬಂದಿದ್ದ ನಿಧಿ ಚೋರರು ಅಲ್ಲಿನ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿ ಹಾಕಿಕೊಂಡು ಜೈಲು ಸೇರಿದ್ದರು. ಅದಾದ ಬಳಿಕ ನಿಧಿ ಚೋರರು ಅಲ್ಲಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿದ ಕುರುಹುಗಳು ಪತ್ತೇ ಆಗುತ್ತಲೇ ಇವೆ. ಇದೀಗ ಸ್ಮಾರಕದ ಮದ್ಯೆ ಬೆಳೆದು ನಿಂತಿದ್ದ ಶ್ರೀಗಂಧದ ಮರವನ್ನೇ ಕಳ್ಳತನ ಮಾಡಿದ್ದಾರೆ ಕಳ್ಳರು,ಇದು ಇಲ್ಲಿನ ಭದ್ರತೆಯ ವೈಫಲ್ಯವನ್ನ ಎತ್ತಿ ತೋರಿಸುತ್ತಿದೆ.
ಶ್ರೀಗಂಧ ಕಳ್ಳತನ ಭದ್ರತಾ ಸಿಬ್ಬಂದಿಗಳಿಗೆ ಸಂಕಷ್ಟ.
ಹೌದು ಇದೀಗ ಶ್ರೀಗಂಧ ಮರ ಕಳ್ಳತನ ಆಗುತ್ತಿದ್ದಂತೆ ಇಲ್ಲಿನ ಭದ್ರತಾ ಸಿಬ್ಬಂದಿಗಳಿಗೆ ಸಂಕಷ್ಟ ಎದುರಾಗಿದೆ. ಕಳ್ಳತನ ನಡೆದ ದಿನದಂದು ಆ ಸ್ಥಳದಲ್ಲಿ ಕಾರ್ಯ ನಿರ್ವಹಿಸುತಿದ್ದ ಸಿಬ್ಬಂದಿಗಳನ್ನ ವಿಚಾರಣೆಗೆ ಒಳಪಡಿಸಿ ಕರ್ತವ್ಯ ಲೋಪ ಕಂಡು ಬಂದರೆ ಅವರಿಗೆ ತಕ್ಕ ಶಿಕ್ಷೆ ಆಗುವ ಸಾಧ್ಯತೆ ಕೂಡ ಇದೆ.
ಕರ್ತವ್ಯ ಮಾಡಬೇಕೋ ಜೀವ ಉಳಿಸಿಕೊಳ್ಳಬೇಕೋ..
ಹೌದು ಹಂಪಿಯಲ್ಲಿ ಇಂತಾ ಅವಘಡಗಳು ನಡೆಯದಂತೆ ಕಡಿವಾಣ ಹಾಕಲು ದಿನದ 24ಗಂಟೆಗಳ ಕಾಲ ಭದ್ರತಾ ಸಿಬ್ಬಂದಿಗಳನ್ನ ನೇಮಕ ಮಾಡಿ ಸ್ಮಾರಕಾಗಳಿಗೆ ರಕ್ಷಣೆ ಕೊಡಲು ಇಲ್ಲಿನ ಇಲಾಖೆಗಳು ಮುಂದಾಗಿವೆ, ಹೀಗಿದ್ದರು ಇಂತಾ ಪ್ರಕರಣ ನಡೆಯುತ್ತಲೇ ಇವೆ, ಇದಕ್ಕೆ ಮೂಲ ಕಾರಣ ಏನು ಎಂಬುದು ಪ್ರಶ್ನೆಯಾಗಿದೆ.
ದಿನದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಯಾವುದೇ ಭಯ ಇಲ್ಲದೆ ಕಾರ್ಯ ನಿರ್ವಹಿಸುತ್ತಾರೆ. ಆದ್ರೆ ರಾತ್ರಿ ಪಾಳ್ಯಯದ ಸಿಬ್ಬಂದಿಗಳು ಇಲ್ಲಿ ಕಾರ್ಯ ನಿರ್ವಹಿಸಬೇಕೆಂದರೆ ಎಲ್ಲಿಲ್ಲದ ಭಯ. ಕಾರಣ ವಿಶ್ವ ವಿಖ್ಯಾತ ಹಂಪಿ ಸುಮಾರು 25ಚದುರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿದೆ. ಅದರಲ್ಲೂ ಹಂಪಿ ಕೇವಲ ಸ್ಮಾರಕಗಳು ಇರುವ ಪ್ರದೇಶ ಮಾತ್ರವಲ್ಲ ವನ್ಯ ಜೀವಿಗಳು ಇರುವ ವಿಶಿಷ್ಟ ಅರಣ್ಯ ಪ್ರದೇಶ ಕೂಡ ಆಗಿದೆ.
ಹಾಗಾಗಿ ಕರಡಿ, ಚಿರತೆಗಳು ಈ ಪ್ರದೇಶದಲ್ಲಿ ಹೆಚ್ಚಾಗಿ ವಾಸಮಾಡುತ್ತವೆ, ಸಂಜೆ ಆಗುತ್ತಿದ್ದಂತೆ ಕಲ್ಲು ಬೆಟ್ಟಗಳಿಂದ ಹೊರ ಬರುವ ಇಲ್ಲಿನ ವನ್ಯ ಮೃಗಗಳು ತಮ್ಮ ಆಹಾರ ಹುಡುಕಿಕೊಳ್ಳುತ್ತವೆ, ಈ ಕಾರಣದಿಂದ ಸಂಜೆ ಆರೇಳು ಗಂಟೆಯಷ್ಟೋತ್ತಿಗೆ ಇಲ್ಲಿನ ಜನ ಸಾಮಾನ್ಯರ ಕಣ್ಣಿಗೆ ಕಾಣಿಸಿಕೊಳ್ಳುತ್ತವೆ ಇಲ್ಲಿನ ವನ್ಯ ಮೃಗಗಳು.ಹಾಗಾಗಿ ಹಂಪಿ ಬಾಗದಲ್ಲಿ ರಾತ್ರಿ ಹೊತ್ತು ಸಂಚಾರಿಸಬೇಕೆಂದರೆ ಕೆಲವರು ಭಯಪಡುವುದು ಕೂಡ ಉಂಟು. ಆದ್ರೆ ಮತ್ತೊಂದು ಸಂತೋಷದ ವಿಚಾರ ಏನೆಂದರೆ ಹಂಪಿ ಬಾಗದಲ್ಲಿ ಇಷ್ಟೆಲ್ಲ ಕಾಡು ಪ್ರಾಣಿಗಳಿದ್ರು ಯಾವೊಂದು ಪ್ರಾಣಿಯೂ ಮನುಷ್ಯರಿಗೆ ಹಾನಿಮಾಡಿದ ಉದಾಹರಣೆಗಳು ಇಲ್ಲ.
ಇಲ್ಲಿನ ವನ್ಯ ಜೀವಿಗಳ ಜೊತೆಯೇ ರಾತ್ರಿ ಪಾಳ್ಯದ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲಿನ ಭದ್ರತಾ ಸಿಬ್ಬಂದಿಗಳಿಗೆ ಇದೆ. ಹೌದು ಸ್ಮಾರಕ ಬಳಿಯಲ್ಲಿ ರಾತ್ರಿ ಕಾರ್ಯ ನಿರ್ವಹಿಸುವ ಭದ್ರತಾ ಸಿಬ್ಬಂದಿಗಳು ಭಯದಲ್ಲೇ ಕಾರ್ಯ ನಿರ್ವಹಿಸಬೇಕಾಗಿದೆ. ಯಾಕೆಂದರೆ ಹಂಪಿಯ ಸ್ಮಾರಕ ಕಾವಲಿಗೆ ಇರುವ ಸಿಬ್ಬಂದಿಗಳ ಕಣ್ಣೆದುರಿಗೆ ಚಿರತೆಗಳು, ಕರಡಿಗಳು ಪ್ರತಿದಿನ ಸಂಚರಿಸುತ್ತವೆ. ಈ ಪ್ರಾಣಿಗಳು ಯಾವಾಗಬೇಕಾದರು ನಮ್ಮ ಮೇಲೆ ದಾಳಿ ನಡೆಸಬಹುದು ಎಂಬ ಭಯದಲ್ಲಿ ರಾತ್ರಿ ಪೂರ್ತಿ ಕಾರ್ಯ ನಿರ್ವಹಿಸಬೇಕಾಗಿದೆ ಇಲ್ಲಿನ ಭದ್ರತಾ ಸಿಬ್ಬಂದಿಗಳು.
ಈ ಭಯದ ಕಾರಣದಿಂದ ಕೆಲವು ಸಿಬ್ಬಂದಿಗಳು ಕಾರ್ಯ ನಿರ್ವಹಿಸದೆ ಸುರಕ್ಷಿತ ಸ್ಥಳದಲ್ಲಿ ಕಾಲ ಕಳೆದು ಕರ್ತವ್ಯ ಲೋಪ ಆರೋಪ ಎದುರಿಸುವ ಅನಿವಾರ್ಯತೆ ಕೂಡ ಇದೆ.ಈ ವನ್ಯ ಜೀವಿಗಳ ಭಯ ಇಲ್ಲಿನ ಭದ್ರತಾ ಸಿಬ್ಬಂದಿಗಳಿಗೆ ಸಂಕಟವಾಗಿದ್ದರೆ, ಇಲ್ಲಿಗೆ ಬರುವ ಕಳ್ಳರಿಗೆ ಮಾತ್ರ ಚಲ್ಲಾಟವಾಗಿದೆ.ಇದೇ ಸಮಯಕ್ಕೆ ಕಾದು ಕುಳಿತುಕೊಳ್ಳುವ ಕಳ್ಳರು ತಮ್ಮ ಕೈಚಳಕ ತೋರಿಸುತ್ತಾರೆ.
ಹಾಗಾಗಿ ಹಂಪಿಯಲ್ಲಿ ಭದ್ರತೆಗೆ ಸಿಬ್ಬಂದಿಗಳನ್ನ ನೇಮಕ ಮಾಡಿದರೆ ಸಾಲದು, ಭದ್ರತಾ ಸಿಬ್ಬಂದಿಗಳ ಜೀವಕ್ಕೆ ಕೂಡ ಭದ್ರತೆ ನೀಡುವ ನಿಟ್ಟಿನಲ್ಲಿ ಇಲ್ಲಿನ ಇಲಾಖೆಗಳು ಯೋಚನೆ ಮಾಡಬೇಕು. ಅಂದಾಗ ಮಾತ್ರ ಇಲ್ಲಿನ ಸಿಬ್ಬಂದಿಗಳು ಅಚ್ಚು ಕಟ್ಟಾಗಿ ಕಾರ್ಯ ನಿರ್ವಹಿಸಲು ಸಾಧ್ಯ, ಇಂತಾ ಕಳ್ಳತನ ಪ್ರಕರಣಕ್ಕೆ ಕಡಿವಾಣ ಕೂಡ ಬಿದ್ದಂತಾಗುತ್ತದೆ.
ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.