ವಿಜಯನಗರ..”ಮೌಲ್ಯಗಳು ನಮ್ಮ ಬದುಕಿಗೆ ಸುಂದರ ರೂಪ ಕೊಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಜೀವನದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಲು ಮೌಲ್ಯಗಳು ಸಹಕಾರಿ” ಎಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶ್ರೀ ಅನಿರುದ್ಧ್ ಶ್ರವಣ್ ಪಿ ಅವರು ಅಭಿಪ್ರಾಯಪಟ್ಟರು.
ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ೨೦೨೧-೨೩ ಸಾಲಿನ ನೂತನ ಎಂ.ಬಿ.ಎ. ಬ್ಯಾಚ್ ತರಗತಿಗಳ ಪ್ರಾರಂಭೋತ್ಸವ ‘ಶುಭಾಕಾಂಕ್ಷ’ ಸಮಾರಂಭದ ಉದ್ಘಾಟನೆಯನ್ನು ದಿನಾಂಕ 18/2/2022 ಶುಕ್ರವಾರದಂದು ನೆರವೇರಿಸಿ ಮಾತನಾಡುತ್ತಿದ್ದರು.
“ಮೌಲ್ಯಗಳನ್ನು ಕುಟುಂಬ, ಸುತ್ತಲಿನ ಸಮಾಜ, ಮಿತ್ರರು, ವಿದ್ಯಾಭ್ಯಾಸ ಮಾಡುವ ಶಿಕ್ಷಣ ಸಂಸ್ಥೆಗಳಿಂದಲೂ ಪಡೆಯುತ್ತೇವೆ. ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ನೀತಿ-ನಿಯಮ, ಆದರ್ಶ, ಶಿಸ್ತು, ಸಂಸ್ಕಾರ, ಮಾನವೀಯ ಗುಣ, ಉತ್ತಮ ನಡವಳಿಕೆಗಳೇ ಮೌಲ್ಯಗಳಾಗಿವೆ, ಮೌಲ್ಯಗಳು ಬದುಕಿನ ಆಧಾರಸ್ತಂಭಗಳು” ಎಂದು ಅವರು ಹೇಳಿದರು.
ವೈಫಲ್ಯಗಳು ಸಾಧನೆಯ ಮೆಟ್ಟಿಲುಗಳು; ವೈಫಲ್ಯಗಳು ಬಂದಾಗ ಎದೆಗುಂದದೇ ಶ್ರದ್ಧೆ, ಕಠಿಣ ಪರಿಶ್ರಮಗಳ ಮೂಲಕ ಮುನ್ನಡೆಯಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ನಿರ್ವಹಣಾ ಕೌಶಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಈ ದಿಸೆಯಲ್ಲಿ ಎಂ.ಬಿ.ಎ. ಶಿಕ್ಷಣ ಉತ್ತಮ ವೃತ್ತಿ ಬದುಕಿಗೆ ಸಹಾಯಕವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಡಿ.ಐ.ಟಿ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಪಲ್ಲೇದ್ ದೊಡ್ಡಪ್ಪ ಅವರು ಮಾತನಾಡಿ ಪೋಷಕರ ಆಸೆಯನ್ನು ಈಡೇರಿಸುವಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡಬೇಕೆಂದು ಹೇಳಿದರು.
ಪ್ರಾಚಾರ್ಯರಾದ ಡಾ. ಎಸ್.ಎಂ. ಶಶಿಧರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ಆರ್ಥಿಕ ಕುಸಿತದ ಯುಗದಲ್ಲಿ, ಉದ್ಯಮಗಳನ್ನು ಲಾಭದಾಯಕವಾಗಿ ಮುನ್ನಡೆಸಲು ವ್ಯವಸ್ಥಾಪಕ ಕೌಶಲ್ಯಗಳು ಮುಖ್ಯವಾಗುತ್ತವೆ. ವ್ಯವಸ್ಥಾಪಕರು ಜಾಗತೀಕರಣದ ಪ್ರಸಕ್ತ ಸನ್ನಿವೇಶ ಮತ್ತು ಸ್ಥಳೀಯ ಪರಿಸರದ ಗ್ರಹಿಕೆ ಹೊಂದಿರಬೇಕು” ಎಂದು ಅಭಿಪ್ರಾಯ ಪಟ್ಟರು.
ಪಿಡಿಐಟಿಯ ಆಡಳಿತ ಮಂಡಳಿಯ ಸದಸ್ಯರುಗಳಾದ ಹೆಚ್. ವಿ. ಶರಣ ಸ್ವಾಮಿ , ಏಕಮರೇಶ್ ಎ ತಾಂಡೂರ್ , ಹೆಚ್ ಎಂ ಉದಯ ಶಂಕರ್ , ಪ್ರೇಮನಾಥ ಗಟ್ಟಿನ, ಪ್ರಾಂಶುಪಾಲರಾದ ಡಾ. ಎಸ್.ಎಂ.ಶಶಿಧರ್, ಉಪ ಪ್ರಾಂಶುಪಾಲ ಡಾ. ಯು. ಎಂ . ರೋಹಿತ್ ಉಪಸ್ಥಿತರಿದ್ದರು. ಎಂ.ಬಿ.ಎ. ಮುಖ್ಯಸ್ಥ ಪ್ರೊ. ರವಿಕುಮಾರ್ ಎಸ್ ಪಿ. ಎಂಬಿಏ ವಿಭಾಗದ ಕುರಿತು ಮಾತನಾಡಿದರು. ಕು. ದೀಪಾ ಹಾಗು ಕು. ಕಾವ್ಯ ಪ್ರಾರ್ಥಿಸಿದರು. ಕು. ಸೋನಿ .ವಿ ಸ್ವಾಗತ ಭಾಷಣ ಮಾಡಿದರು. ಕು. ಪೂಜಾ ನಾಯ್ಡು ಹಾಗೂ ಕು. ರುಚಿತಾ ನಿರೂಪಿಸಿದರು, ಕು. ದೀಪಾ ಶಾಸ್ತ್ರಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪಾಲ್ಗೊಂಡಿದ್ದರು.