ಹೊಸಪೇಟೆ (ವಿಜಯನಗರ): ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದ ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಲಾಭವಾಗುತ್ತಿಲ್ಲ. ಪರೋಕ್ಷ, ಅಪರೋಕ್ಷವಾಗಿ ಎಲ್ಲ ವರ್ಗದವರು ಅದರ ಫಲಾನುಭವಿಗಳು’ ಎಂದು ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಟಿ.ಎಚ್. ಬಸವರಾಜ ಹೇಳಿದರು.
ಪ್ರಜಾವಾಣಿ ಅಮೃತ ಮಹೋತ್ಸವದ ಅಂಗವಾಗಿ ನೆಹರು ಯುವ ಕೇಂದ್ರ, ಹಂಪಿ ಸಿದ್ದರಾಮೇಶ್ವರ ಕಲಾ ಸಾಂಸ್ಕೃತಿಕ ಸಂಘ, ಷಾ ಭವರಲಾಲ್ ಬಾಬುಲಾಲ್ ನಾಹರ್ ಶಿಕ್ಷಣ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ಮಂಗಳವಾರ ನಗರದ ಎಸ್.ಬಿ.ಬಿ.ಎನ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿದರು.
ಸಂವಿಧಾನದಲ್ಲಿ ಪ್ರಸ್ತಾಪಿಸಿರುವ ಹಕ್ಕುಗಳು, ಸಾಂವಿಧಾನಿಕ ರಕ್ಷಣೆ ಎಲ್ಲ ವರ್ಗದವರಿಗೂ ಸಿಗುತ್ತಿದೆ. ಆದರೆ, ವ್ಯವಸ್ಥಿತವಾಗಿ ಅದರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಶಿಕ್ಷಕರು, ಪ್ರಾಧ್ಯಾಪಕರು ಸಂವಿಧಾನದ ಉದ್ದೇಶವನ್ನು ಮನದಟ್ಟು ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅರ್ಥೈಸುವ ಕೆಲಸ ಮಾಡಬೇಕು ಎಂದರು.
ಈ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಸತ್ತಿನ ಪರಿಕಲ್ಪನೆ ಹುಟ್ಟು ಹಾಕಿದವರು ಹನ್ನೆರಡನೇ ಶತಮಾನದ ಶರಣರು. ಅನುಭವ ಮಂಟಪದಲ್ಲಿ ಜನವಾಣಿಗೆ ಮಾನ್ಯತೆ ಇತ್ತು. ಅದನ್ನು ಸ್ವತಂತ್ರ ಭಾರತದಲ್ಲಿ ಹೊಸ ಪರಿಕಲ್ಪನೆಯೊಂದಿಗೆ ಜಾರಿಗೆ ತಂದವರು ಡಾ.ಬಿ.ಆರ್. ಅಂಬೇಡ್ಕರ್. ಸಂವಿಧಾನ ರಚನಾ ಸಮಿತಿಯಲ್ಲಿ ಹಲವು ಸದಸ್ಯರಿದ್ದರು. ಕೀಳರಿಮೆಗೆ ರಾಜೀನಾಮೆ ಕೊಟ್ಟು ಹೆಚ್ಚಿನವರು ಹೊರ ನಡೆದಾಗ ಅಂಬೇಡ್ಕರ್ ಅವರು ಎದೆಗುಂದದೆ ಸಂವಿಧಾನ ಕರಡು ತಯಾರಿಸುವ ಕೆಲಸ ಆರಂಭಿಸುತ್ತಾರೆ ಎಂದು ಹೇಳಿದರು.
ಸಂವಿಧಾನ ರಚನಾ ಸಮಿತಿಯಲ್ಲಿ ಹದಿನೈದು ಜನ ಹೆಣ್ಣು ಮಕ್ಕಳು ಇದ್ದರು. ಜಾತ್ಯತೀತ, ಭಾತೃತ್ವ, ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ವಯಸ್ಕ ಮತದಾನ ಪದ್ಧತಿಯಂಥ ವ್ಯವಸ್ಥೆ ಜಾರಿಗೆ ಇವರೆಲ್ಲ ಸಲಹೆ ಮಾಡಿದ್ದರು. ಅದರ ಬಗ್ಗೆ ಅಂಬೇಡ್ಕರ್ ಅವರು ಆಳವಾಗಿ ಅಧ್ಯಯನ ನಡೆಸಿ, ಚರ್ಚಿಸಿದ ನಂತರ ಸಂವಿಧಾನದಲ್ಲಿ ಸೇರಿಸಿದರು ಎಂದರು.
ದೇಶದಲ್ಲಿ ದಲಿತರಂತೆ, ಹೆಣ್ಣು ಮಕ್ಕಳಿಗೂ ದ್ವಿತೀಯ ದರ್ಜೆ ಸ್ಥಾನಮಾನವಿದೆ ಎಂದರಿತ ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ತರಲು ಶ್ರಮಿಸುತ್ತಾರೆ. ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೂ ಪಾಲು ಕೊಡಬೇಕು ಎಂದು ಹೇಳುತ್ತಾರೆ. ಸರೋಜಿನಿ ನಾಯ್ಡು ಕೂಡ ಅದನ್ನು ವಿರೋಧಿಸುತ್ತಾರೆ. ಅದಕ್ಕೆ ಅಡ್ಡಿಪಡಿಸಿದಾಗ ಅಂಬೇಡ್ಕರ್ ಅವರು ಕಾನೂನು ಸಚಿವ ಸ್ಥಾನ ತ್ಯಜಿಸುತ್ತಾರೆ ಎಂದು ತಿಳಿಸಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಮಂಟು ಪತ್ತಾರ್, ಜಗತ್ತಿನ ಅತಿದೊಡ್ಡ ಸಂವಿಧಾನ ನಮ್ಮದು. ಸಂವಿಧಾನದ ಜ್ಞಾನ ಬಹಳ ಅಗತ್ಯ. ಆಗ ನಮ್ಮ ಹೊಣೆಗಾರಿಕೆ ಏನೆಂಬುದು ಗೊತ್ತಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಜಿ. ಶಿವುಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ದೇಶದಲ್ಲಿ 68 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೂ ಎಲ್ಲ ರಂಗಗಳನ್ನು ವ್ಯವಸ್ಥಿತವಾಗಿ ಖಾಸಗೀಕರಣಗೊಳಿಸಲಾಗುತ್ತಿದೆ. ಇದು ಸಂವಿಧಾನದ ಮೂಲ ಉದ್ದೇಶಕ್ಕೆ ವಿರುದ್ಧವಾದುದು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ವಿಶ್ವನಾಥಗೌಡ ಮಾತನಾಡಿ, ಸಂವಿಧಾನದಿಂದ ಹಕ್ಕುಗಳನ್ನು ಪಡೆಯುತ್ತೇವೆ. ಅದರ ಬಗ್ಗೆ ಮಾತಾಡುತ್ತೇವೆ. ಆದರೆ, ನಮ್ಮ ಕರ್ತವ್ಯಗಳ ಬಗ್ಗೆಯೂ ಅರಿವಿರಬೇಕು. ಜಾತಿ. ಧರ್ಮ, ದೇವರ ಹೆಸರಿನಲ್ಲಿ ದಿಕ್ಕು ತಪ್ಪಿಸಲಾಗುತ್ತಿದೆ. ಅದರ ಬಗ್ಗೆ ಜಾಗೃತರಾಗಿರಬೇಕು. ದೇವಸ್ಥಾನ ನಿರ್ಮಿಸಿದ ವ್ಯಕ್ತಿಗೆ ಇಂದು ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸುತ್ತಿರುವುದು ದುರಂತ ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಶಿವನಗೌಡ ಸಾತ್ಮಾರ್, ಪ್ರತಿಯೊಬ್ಬರಿಗೂ ರೇಷನ್ ಕೊಡುವಂತೆ ಸರ್ಕಾರ ಪ್ರತಿಯೊಬ್ಬರಿಗೂ ಸಂವಿಧಾನದ ಪುಸ್ತಕಗಳನ್ನು ಕೊಡಬೇಕು. ಆಗ ಎಲ್ಲರಿಗೂ ಅದರ ಮಹತ್ವ ತಿಳಿಸಬಹುದು ಎಂದು ಹೇಳಿದರು.
ಸಿದ್ದರಾಮೇಶ್ವರ ಕಲಾ ಸಂಘದ ಅಧ್ಯಕ್ಷ ವಿರೂಪಾಕ್ಷಿ ವಿ, ಮಾತನಾಡಿ, ಸಂವಿಧಾನ ಈ ದೇಶದ ಅಂತಃಸತ್ವ. ಅದರ ಬಗ್ಗೆ ಎಲ್ಲರಿಗೂ ಜ್ಞಾನ ಅಗತ್ಯ ಎಂದರು.
ಗಾಯಕಿ ಮಮತಾ ಮನ್ವಾಚಾರಿ ಅವರು ಕನಕದಾಸರ ‘ಕುಲ, ಕುಲ’ ಗೀತೆ ಹಾಡಿದರು. ನಗರಸಭೆ ಅಧ್ಯಕ್ಷೆ ಸುಂಕಮ್ಮ, ಐಕ್ಯೂಎಸಿ ಸಂಯೋಜಕ ಜಗದೀಶ್ ಶೇಖರಯ್ಯ, ಉಪನ್ಯಾಸಕರಾದ ಶೋಭಾ ಪಾಟೀಲ, ಕೆ.ಎಚ್.ಎಂ. ಮಲ್ಲಿಕಾ, ನಾಗಣ್ಣ ಕಿಲಾರಿ, ಪ್ರಜಾವಾಣಿಯ ಹಿರಿಯ ವರದಿಗಾರ ಶಶಿಕಾಂತ ಶಿಂಬಿಹಳ್ಳಿ ಹಾಜರಿದ್ದರು.
‘ಭಾರತ ಸಂವಿಧಾನ’ ಕುರಿತ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಸೌಂದರ್ಯ (ಪ್ರಥಮ), ಮಮತಾ (ದ್ವಿತೀಯ) ಹಾಗೂ ತೃತೀಯ ಬಹುಮಾನ ಹಂಚಿಕೊಂಡ ಗಾಣಿಗೇರ್ ನಂದಿನಿ, ಸಂತೋಷ್ ಕುಮಾರ್ ಅಕ್ಕಿ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ವರದಿ.ಸುಭಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.