You are currently viewing ಗೋರಿಯ ಮೇಲೆ ನೆಮ್ಮದಿಯ ನಿದ್ರೆ.

ಗೋರಿಯ ಮೇಲೆ ನೆಮ್ಮದಿಯ ನಿದ್ರೆ.

  • Post category:Top news

ಹಿಂದೂಗಳ ಸ್ಮಶಾನವಾಗಿರಲಿ ಅಥವಾ ಮುಸ್ಲೀಮರ ಕಬರಸ್ಥಾನ್ ಆಗಿರಲಿ, ಈ ಜಾಗ ಎಂದ ಕೂಡ್ಲೆ ಎಲ್ಲರ ಮನದಲ್ಲಿ ದುಗುಡ, ದುಮ್ಮಾನಗಳು ಎದುರಾಗೋದು ಸರ್ವೇಸಾಮಾನ್ಯ, ಅದರಲ್ಲಿಯೂ ನಮ್ಮ ಬಹುತೇಕ ಜನ ಸಾಮಾನ್ಯರ ಮನಸಿನಲ್ಲಿ ಈ ಸ್ಥಳದ ಕುರಿತು ಭಯದ ವಾತವರಣ ಇದ್ದೇ ಇದೆ, ಆದ್ರೆ ಇಲ್ಲೊಂದು ಕಬರಸ್ಥಾನ ಇದೆ, ಈ ಸ್ಥಳದಲ್ಲಿ ಮಕ್ಕಳು ಮಹಿಳೆಯರು ಎನ್ನದೆ ಮನೆಯ ಕುಟುಂಭದ ಸದಸ್ಯರೆಲ್ಲರು ಒಟ್ಟಿಗೆ ಸೇರಿ ಐದು ದಿನಗಳ ಕಾಲ ನೆಮ್ಮದಿಯಿಂದ ನಿದ್ರೆಮಾಡಿ ಮರಳುತ್ತಾರೆ.

ಅದರಲ್ಲೂ ಇತ್ತೀಚೆಗೆ ನಿರ್ಮಾಣವಾದ ಹೊಸ ಗೋರಿಗಳ ಮೇಲೆಯೇ ಮಲಗುವುದನ್ನ ಇಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುತ್ತೇವೆ,ಹೌದು ಹೀಗೆ ಬಣ್ಣ ಬಣ್ಣದ ದೀಪಗಳಿಂದ ಅಲಂಕ್ರತಗೊಂಡಿರುವ ಈ ದರ್ಗಾ ಇರೋದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಬಿರಬ್ಬಿ ಗ್ರಾಮದಲ್ಲಿ, ಕೇವಲ ನಾಲ್ಕು ನೂರು ಐದು ನೂರು ಮನೆಗಳಿರುವ ಈ ಗ್ರಾಮ ಇದೀಗ ನಮ್ಮ ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗುತ್ತಿದೆ, ಅದಕ್ಕೆ ಕಾರಣ ಈ ದರ್ಗಾ.

 ಹೌದು ಕಳೆದ ಮೂರು ಶತಮಾನಗಳಷ್ಟು ಹಳೆಯ ಇತಿಹಾಸ ಇದೆಯಂತೆ ಈ ಹಜರತ್ ಪೀರ್ ವಲಿ ದರ್ಗಾಕ್ಕೆ, ಆದ್ರೆ ಈ ಕುರಿತು ಯಾವುದೇ ದಾಖಲೆಗಳು ಮಾತ್ರ ಇಲ್ಲ, ಇದಕ್ಕೆ ದಾಖಲೆಯಂತೆ ಉಳಿದಿರುವುದು ಈ ಗ್ರಾಮದ ಜನಗಳ ಮಾತು ಮಾತ್ರ, ತಮ್ಮ ಹಿರಿಯರು ಆಚರಿಸಿಕೊಂಡು ಬಂದ ಆಚರಣೆಯನ್ನ ಇಂದಿಗೂ ಈ ಗ್ರಾಮದ ಜನ ಸಾಮಾನ್ಯರು ಮುಂದುವರೆಸಿಕೊಂಡು ಹೊರಟಿದ್ದಾರೆ.

 ಹೌದು ಬಾವೈಕ್ಯೆತೆ ಕೇಂದ್ರವಾಗಿರುವ ಈ ಬಿರಬ್ಬಿ ಗ್ರಾಮದಲ್ಲಿ ಪ್ರತಿ ಗೌರಿ ಹುಣ್ಣಿಮೆ ಬಂತೆಂದ್ರೆ ಎಲ್ಲಿಲ್ಲದ ಸಂಭ್ರಮ, ಗೌರಿ ಹುಣ್ಣಿಮೆ ಮುಗಿದ ಮೂರು ದಿನಗಳ ನಂತ್ರ ಐದು ದಿನಗಳ ಕಾಲ ಈ ಸ್ಥಳದಲ್ಲಿ ಉರುಸ್ ನಡೆಯುತ್ತೆ,  ಬಳ್ಳಾರಿ ವಿಜಯನಗರ ಜಿಲ್ಲೆ ಸೇರಿದಂತೆ ನೆರೆಯ ಗದಗ, ಕೊಪ್ಪಳ, ಹಾವೇರಿ, ದಾವಣಗೇರಿ ಜಿಲ್ಲೆಗಳಿಂದ ಸಾವಿರಾರು ಭಕ್ತರು ಈ ಉರುಸ್ ನಲ್ಲಿ ಬಾಗವಹಿಸಿ ತಮ್ಮ ಕಷ್ಟಕಾರ್ಪಣ್ಯಗಳನ್ನ ಪರಿಹರಿಸಿಕೊಳ್ಳುವುದು ಪ್ರತಿ ವರ್ಷದ ವಾಡಿಕೆ.

ಸಹಜವಾಗಿ ಯಾವುದೇ ಜಾತ್ರೆಗಳು ಅಥವಾ ಉರುಸ್ ನಡೆಯುವುದು ಆಯಾ ದೇವಸ್ಥಾನ ಅಥವಾ ದರ್ಗಾ ಸುತ್ತ ಮುತ್ತಲಿನ ಪ್ರದೇಶದಲ್ಲಿ, ಆದ್ರೆ ಈ ಸ್ಥಳದ ವಿಶೇಷತೆಯೇ ಬೇರೆ, ಇಲ್ಲಿ ಕೂಡ ದರ್ಗಾ ಸುತ್ತ ಮುತ್ತಲಿನ ಪ್ರದೇಶದಲ್ಲಿಯೇ ಉರುಸ್ ನಡೆಯುತ್ತೆ, ಆದ್ರೆ ಈ ಪ್ರದೇಶ ನಾವು ನೀವು ಸಹಜವಾಗಿ ಸಂಚಾರ ನಡೆಸುವ ಸಾಮಾನ್ಯ ಪ್ರದೇಶ ಅಲ್ಲ, ಬದಲಾಗಿ ಆತ್ಮಗಳು ಸಂಚಾರ ನಡೆಸುವ ಪ್ರದೇಶ, ಅಂದ್ರೆ ಸ್ಮಾಶನ ಅಥವಾ ಖಬರ್ ಸ್ಥಾನ್ ಎಂದು ನಾವೇನು ಕರೆಯುತ್ತೇವಲ್ಲ ಅದೇ ಈ ಪ್ರದೇಶ.

 ಹೌದು ಹಿಂದೂ ಧರ್ಮದ  ಸ್ಮಶಾನಗಳಲ್ಲಾಗಲಿ ಅಥವಾ ಮುಸ್ಲಿಂ ಧರ್ಮದ ಖಬರ್ ಸ್ಥಾನ್ ಗಳಲ್ಲಾಗಲಿ ಶವ ಸಂಸ್ಕಾರದ ಸಂದರ್ಭಗಳನ್ನ ಹೊರತುಪಡಿಸಿ ಉಳಿದ ದಿನಗಳಲ್ಲಿ ಹೆಚ್ಚು ಜನಗಳು ಸೇರುವುದನ್ನ ನಾವು ಕಾಣಲು ಸಾಧ್ಯವೇ ಇಲ್ಲ, ಯಾಕೆಂದ್ರೆ ಎಲ್ಲರ ಭಾವನೆಯಲ್ಲಿ ಸ್ಮಶಾನ ಮತ್ತು ಖಬರ್ ಸ್ಥಾನಗಳ ಬಗ್ಗೆ ಭಯ ಇದ್ದೇ ಇರುತ್ತೆ, ಆದ್ರೆ ಈ ಬಿರಬ್ಬಿ ಗ್ರಾಮದಲ್ಲಿನ ಈ ಖಬರ್ ಸ್ಥಾನದ ಬಗ್ಗೆ ಇಲ್ಲಿಗೆಬರುವ ಜನಗಳಿಗೆ ಭಯ ಇಲ್ಲ.

 ಗೌರಿ ಹುಣ್ಣಿಮೆ ಮುಗಿದು ಮೂರನೆ ದಿನದ ನಂತ್ರ ಪ್ರಾರಂಭವಾಗುವ ಈ ಉರುಸ್ ನಿರಂತರ ಮೂರುದಿನಗಳ ಕಾಲ ನಡೆಯುತ್ತೆ, ಬೇರೆ ಬೇರೆ ಜಿಲ್ಲೆಗಳಿಂದ ಬರುವ ಸಾವಿರಾರು ಭಕ್ತರು ಇಲ್ಲಿರುವ ಗೋರಿಗಳ ಮೇಲೆ ಮಲಗುತ್ತಾರೆ, ಕುಳಿತುಕೊಳ್ಳುತ್ತಾರೆ, ತಮ್ಮ ಇಚ್ಚಾನುಸಾರ ಮಾಂಸದ ಊಟ ಸಿದ್ದಪಡಿಸಿಕೊಂಡು ಊಟಮಾಡುವ ಮೂಲಕ ಇಲ್ಲೇ ಐದು ದಿನಗಳ ಕಾಲ ಇಲ್ಲೇ ಉಳಿದುಕೊಳ್ಳುತ್ತಾರೆ.

 ಸ್ಮಶಾನ ಅಥವಾ ಖಬರ್ ಸ್ಥಾನ ಎಂದ್ರೆ ಮಕ್ಕಳು ಮಹಿಳೆಯರು ಭಯಪಡುವುದು ಹೆಚ್ಚು.ಆದ್ರೆ ಇಲ್ಲಿ ಹೆಚ್ಚಿನ ಸಂಖೆಯಲ್ಲಿ ಅವರೇ ಕಾಣಸಿಗುವುದು ಮತ್ತೊಂದು ವಿಷೇಶ, ಹಿರಿಯರ ಗೋರಿಗಳ ಮೇಲೆ ಕಿರಿಯರ ವಿಶ್ರಾಂತಿ, ಹೌದು ಈ ಗ್ರಾಮದಲ್ಲಿ ಐದು ದಿನಗಳ ಕಾಲ ನಡೆಯುವ ಉರುಸ್ ಗೆ ಬರುವ ಭಕ್ತರು ಗೋರಿಗಳ ಮೇಲೆ ಮಲಗುವುದು ಸರ್ವೇ ಸಾಮಾನ್ಯ, ಗೋರಿಗಳ ಮೇಲೆ ಮಲಗಿದರೆ ಅವರ ಹಿರಿಯರಿಗೆ ತಮ್ಮ ಕಷ್ಟಗಳನ್ನ ಹಂಚಿಕೊಂಡ ಅನುಭವವಾಗುತ್ತಂತೆ ಇಲ್ಲಿಗೆ ಬರುವ ಭಕ್ತರಿಗೆ.

 ಮಾನಸಿಕ ಹಿಂಸೆ ಅಥವಾ ಕಾಯಿಗಳಿಂದ ಬಳಲುತ್ತಿದ್ರೆ ಈ ಗೋರಿಯ ಮೇಲೆ ವಿಶ್ರಾಂತಿ ಪಡೆದು ಹೋದ್ರೆ ವರ್ಷ ಬರುವಷ್ಟರಲ್ಲಿ ಗುಣಮುಖರಾಗುತ್ತೇವೆ ಎನ್ನುವನಂಬಿಕೆ ಇಲ್ಲಿಗೆ ಬರುವ ಭಕ್ತರದ್ದು, ಇನ್ನು ಈ ಪ್ರದೇಶದಲ್ಲಿರುವ ಪ್ರತಿಯೊಂದು ಗೋರಿಗಳು ಈ ಬಿರಬ್ಬಿ ಗ್ರಾಮದಲ್ಲಿ ಮಡಿದವರ ಗೋರಿಗಳು, ಅದರಲ್ಲಿರುವ ಐದು ಪ್ರಮುಖ ದರ್ಗಾಗಳು ಮಾತ್ರ ಇಲ್ಲಿಗೆ ವಲಸೆ ಬಂದ ಶರಣರ ದರ್ಗಾಗಳೆಂದು ಈ ಗ್ರಾಮದ ಜನ ಸಾಮಾನ್ಯರು ಹೇಳುತ್ತಾರೆ.

 ಒಂದಾನೊಂದು ಕಾಲದಲ್ಲಿ ಮಾರಕ ಕಾಯಿಲೆ ಈ ಗ್ರಾಮಕ್ಕೆ ಬಂದು ಅಪ್ಪಳಿಸಿದಾಗ ಈ ಗ್ರಾಮದಲ್ಲಿ ಸಾವಿನ ಸಂಖೆ ಪ್ರತಿಧಿನ ಹೆಚ್ಚಾಗುತ್ತಲೇ ಹೋಯ್ತೆತಂತೆ, ಸರಿಯಾಗಿ ವೈಧ್ಯಕೀಯ ಸೌಲಭ್ಯ ಇಲ್ಲದ ಆ ಸಂಧರ್ಭದಲ್ಲಿ ಈ ಗ್ರಾಮದ ಜನ ಸಾಮಾನ್ಯರು ದಿಕ್ಕು ಕಾಣದೆ ಕಂಗಾಲಾಗಿ ದೇವರ ಮೊರೆ ಹೋಗಿದ್ರು ಎನ್ನಲಾಗಿದೆ, ಆಗ ಈ ಗ್ರಾಮಕ್ಕೆ ಪ್ರವೇಶ ನೀಡಿದವರೇ ಈ ಐವರು ಮಹಾ ಪುರುಷರು, ಗ್ರಾಮದ ಸುತ್ತ ಪ್ರದಕ್ಷಣೆ ಹಾಕಿದ ಮಹಾ ಪುರುಷರು ಗ್ರಾಮಕ್ಕೆ ಅಂಟಿಕೊಂಡಿದ್ದ ಮಾರಕ ಕಾಯಿಲೆಯನ್ನ ಅಲ್ಲಿಂದ ತೊಲಗಿಸಿದ ಮೇಲೆ ಈ ಗ್ರಾಮದ ಜನ ಸಾಮಾನ್ಯರು ಈ ಮಹಾ ಪುರುಷರನ್ನ ಆರಾದಿಸುವುದಕ್ಕೆ ಪ್ರಾರಂಭಿಸಿದ್ರಂತೆ.

 ಕೊನೆಗೆ ಅಂದಿನ ಕಾಲದಲ್ಲಿ ಕಾಯಿಲೆಯಿಂದ ಮಡಿದ ಜನ ಸಾಮಾನ್ಯರನ್ನ ದಫನ್ ಮಾಡಿದ ಸ್ಥಳದಲ್ಲೇ ಈ ಮಹಾ ಪುರುಷರು ಕೂಡ ಐಕ್ಯರಾಗಿ ನೆಲಸಿದ್ರು ಎನ್ನುವುದು ಈ ಗ್ರಾಮಗಳ ಹಿರಿಯ ಜೀವಿಗಳು ಹೇಳುವ ಮಾತು, ಅಲ್ಲಿಂದ ಈ ಸ್ಥಳದಲ್ಲಿ ಉರುಸ್ ಪ್ರಾರಂಭವಾಯಿತು ಎನ್ನುವುದು ಇತಿಹಾಸ, ಆದ್ರೆ ಈ ರೀತಿ ನಡೆದಿದೆ ಎನ್ನುವುದಕ್ಕೆ ಯಾವುದೇ ದಾಖಲೆಗಳು ಪುರಾವೆಗಳು ಇಲ್ಲ ಬರೀ ಜನಪದ ಮಾತ್ರ.

ಇನ್ನು ಈ ಶರಣರ ದರ್ಗಾಗಳನ್ನ ಅಭಿವ್ರದ್ದಿಪಡಿಸುವುದಾಗಿ ಈ ಹಿಂದೆ ಸಾಕಷ್ಟು ಜನಗಳು ಹೇಳಿಕೊಂಡ್ರಂತೆ. ಆದ್ರೆ ಹೇಳಿ ಕೊಂಡಯಾವೊಬ್ಬ ಹಣವಂತನೂ ಮಾರನೆ ವರ್ಷ ಈ ದರ್ಗಾಕ್ಕೆ ಬಂದಿರುವ ಉದಾಹರಣೆಗಳಿಲ್ಲ ಎಂದು ಈ ಗ್ರಾಮಸ್ಥರು ಹೇಳುತ್ತಾರೆ, ಹಾಗಾಗಿ ಹಣವಂತರಾಗಲಿ, ರಾಜಕಾರಣಿಗಳಾಗಲಿ ಇಲ್ಲಿಗೆ ಬಂದು ದರ್ಗಾ ಅಭಿವ್ರದ್ದಿಪಡಿಸುವ ಮಾತುಗಳನ್ನಾಡಿಲ್ಲ, ಇಲ್ಲಿಗೆ ಬರುವ ಪ್ರತಿಯೊಬ್ಬ ಕಡು ಬಡವರು ಮತ್ತು ಶ್ರಮ ಜೀವಿಗಳು ನೀಡಿದ ಒಂದು ರೂಪಾಯಿ ಎರಡು ರೂಪಾಯಿ ದೇಣಿಗೆಯಿಂದ ಈ ದರ್ಗಾ ಅಭಿವ್ರದ್ದಿ ಪಡಿಸಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ,

ಇನ್ನು ಈ ಶರಣರು ಹಿಂದೆ ತಪಸ್ಸನ್ನ ಆಚರಿಸಿದ್ದ ಈ ಗುಡ್ಡದ ಮೇಲೆ ಕೂಡ ಗದ್ದುಗೆ ಇದ್ದು ಪ್ರತಿ ಅಮವಾಸೆ ಮತ್ತು ಈ ಉರುಸ್ ಆಚರಣೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಭಕ್ತರು ಇಲ್ಲಿಗೆ ಬೇಟಿಕೊಟ್ಟು ಪ್ರಾರ್ಥನೆ ಸಲ್ಲಿಸಿ ತಮ್ಮ ಮನಸಿನ ನೋವನ್ನ ತೋಡಿಕೊಳ್ಳುತ್ತಾರೆ, ತಮ್ಮ ಮನಸ್ಸಿನಲ್ಲಿದ್ದ ಬೇಡಿಕೆಗಳನ್ನ ಈಡೇರಿಸುವಂತೆ ಬೇಡಿಕೊಳ್ಳುವ ಭಕ್ತರು ಗುಡ್ಡದಲ್ಲಿ ಪ್ರದಕ್ಷಿಣೆಹಾಕುವುದು ವಾಡಿಕೆ.

ದೇವನೊಬ್ಬ ನಾಮ ಹಲವು, ಹೌದು ಈ ಹಜರತ್ ಪೀರ್ ವಲಿ ಶಾ ಹೆಸರಿನಲ್ಲಿ ಮುಸಲ್ಮಾನರು ಈ ದರ್ಗಾವನ್ನ ಪೂಜಿಸಿದ್ರೆ ಹಿಂದೂ ಬಾಂದವರು ಗುರುಸ್ವಾಮಿ ಎನ್ನುವ ಹೆಸರಿನಲ್ಲಿ ಪೂಜಿಸುವುದು ಮತ್ತೊಂದು ವಿಷೇಶ, ಬಾವೈಖ್ಯೆತೆಗೆ ಹೆಸರಾಗಿರುವ ಈ ಧಾರ್ಮಿಕ ಸ್ಥಳದಲ್ಲಿ ಎಲ್ಲಾ ಧರ್ಮಿಯರು ಒಟ್ಟುಗೂಡಿ ಉರುಸ್ ಆಚರಿಸುವುದನ್ನ ನೋಡೊದಕ್ಕೆ ಎರಡು ಕಣ್ಣುಸಾಲದು.

ವರದಿ:..

ಸುಬಾನಿ ಪಿಂಜಾರ.ವಿಜಯನಗರ.