You are currently viewing ಕೃಷಿ ಸಾಧಕರನ್ನು ಗುರುತಿಸಿ ಗೌರವಿಸಿದ ಪ್ರಜಾವಾಣಿ

ಕೃಷಿ ಸಾಧಕರನ್ನು ಗುರುತಿಸಿ ಗೌರವಿಸಿದ ಪ್ರಜಾವಾಣಿ

ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ
ಕಾರ್ಯಕ್ರಮದಲ್ಲಿ ರೈತರಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಗರಿಬೊಮ್ಮನಹಳ್ಳಿ ಹಿರೇಸೊಬಟಿಯ ಎಚ್‌. ಈರಣ್ಣ ಕಡ್ಲೆಪ್ಪ, ನೆಲ್ಕುದ್ರಿಯ ಎಚ್‌. ಬಸವರಾಜ ಸಿದ್ದಪ್ಪ, ಹರಪನಹಳ್ಳಿಯ ಕಮಲಮ್ಮ ಬಸವಂತಪ್ಪ, ಸುಜಾತ ನಾಗರಾಜ್‌, ಹೂವಿನಹಡಗಲಿಯ ರವಿಕುಮಾರ ದೊಡ್ಡಮನಿ, ವೀರಣ್ಣ ಹಕ್ಕಂಡಿ, ಕೂಡ್ಲಿಗಿಯ ಎಚ್‌.ಬಿ. ಮಹದೇವಸ್ವಾಮಿ, ಹೊಸಪೇಟೆಯ ಎನ್‌.ಟಿ. ವೀರಣ್ಣ ತಾಳೂರಪ್ಪ, ಭಾರತಿ ಪಾಟೀಲ ಅವರಿಗೆ ಜಿಲ್ಲಾಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹೊಸಪೇಟೆಯ ರೈತರಾದ ಡಾ. ಅಜಯ್‌ ಕುಮಾರ್‌ ತಾಂಡೂರ್‌, ಗೀತಾ ಸುರೇಂದ್ರಬಾಬು, ನಾಗೇಂದ್ರಪ್ಪ ಜಂಬಯ್ಯ, ಜಿ. ಸಿದ್ರಾಮಪ್ಪ ಬಸಪ್ಪ, ಹನುಮಕ್ಕ ಸಿದ್ದಪ್ಪ ಅವರಿಗೆ ತಾಲ್ಲೂಕು ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ನಿಷ್ಪಕ್ಷಪಾತ ಕೆಲಸ’
‘ಪ್ರಜಾವಾಣಿ ಪತ್ರಿಕೆ 75 ವಸಂತಗಳನ್ನು ಪೂರೈಸಿದೆ. ಪತ್ರಿಕೆಯು ಬಹಳ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ. ಎಲ್ಲ ಸುದ್ದಿಗಳನ್ನು ಅತ್ಯಂತ ನಿಖರ, ವಸ್ತುನಿಷ್ಠವಾಗಿ ಪ್ರಕಟಿಸುತ್ತಿದೆ. ವಿಶ್ವಾಸಾರ್ಹತೆಯೊಂದಿಗೆ ಕೆಲಸ ಮಾಡುತ್ತಿದೆ. ರೈತರು ಸೇರಿದಂತೆ ವಿವಿಧ ವರ್ಗದವರ ಸಮಸ್ಯೆಗಳನ್ನು ಅತ್ಯಂತ ನಿಖರವಾಗಿ ತಿಳಿಸುವ ಕೆಲಸ ಮಾಡುತ್ತಿದೆ. ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಪ್ರಜಾವಾಣಿ ಬಳಗಕ್ಕೆ ಅಭಿನಂದನೆಗಳು’ ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಹೇಳಿದರು.

‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ರೈತರ ದಿನಾಚರಣೆ ಎಂದೂ ಮುಚ್ಚಲಾರದ ಕಾರ್ಖಾನೆ ಕೃಷಿ
‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ವಿಜಯನಗರ ಜಿಲ್ಲಾ ಕೃಷಿ ಇಲಾಖೆ ಹಾಗೂ ಇನ್ನರ್‌ ವೀಲ್‌ ಕ್ಲಬ್‌ ಸಹಭಾಗಿತ್ವದಲ್ಲಿ ಶುಕ್ರವಾರ ನಗರದ ಸಾಯಿಲೀಲಾ ರಂಗಮಂದಿರದಲ್ಲಿ ರೈತರ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕೃಷಿಕರು, ವಿವಿಧ ರೈತ ಸಂಘಟನೆಗಳವರ ಸಮ್ಮುಖದಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರು ಮಾಜಿಪ್ರಧಾನಿ, ರೈತ ಮುಖಂಡ ಚೌಧರಿ ಚರಣ್‌ ಸಿಂಗ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮಡಿಕೆಗೆ ರಾಗಿ ಸುರಿದು ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಸಿದ್ದರಾಮೇಶ್ವರ, ‘ಭಾರತದಲ್ಲಿ ಕೃಷಿಕರ ಸಂಖ್ಯೆ ಶೇ 50ರಷ್ಟಿದೆ. ಭಾರತ ಕೃಷಿ ಪ್ರಧಾನವಾದ ರಾಷ್ಟ್ರವಾಗಿ ಜಗತ್ತಿನಲ್ಲಿ ಗುರುತಿಸಿಕೊಂಡಿದೆ. ಇದು ಭಾರತಕ್ಕೆ ಗೌರವದ ವಿಷಯ. ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡು ಸುಧಾರಿತ ಕೃಷಿ ಮಾಡಿ ರೈತರು ಲಾಭ ಗಳಿಸಬೇಕು. ಕೋವಿಡ್‌ ಸಂದರ್ಭದಲ್ಲಿ ಕೈಗಾರಿಕೆಗಳು, ಉದ್ಯಮಗಳು ಬಂದ್‌ ಆಗಿದ್ದವು. ಆದರೆ, ಉತ್ತುವುದು, ಬಿತ್ತುವುದು ನಿಂತಿರಲಿಲ್ಲ. ಎಂದೂ ಮುಚ್ಚಲಾರದ ಕಾರ್ಖಾನೆ ಎಂದರೆ ಕೃಷಿ’ ಎಂದು ಹೇಳಿದರು.

ನಮ್ಮ ದೇಶದ ಅನ್ನದಾತರು ದೇಶದ ಜನತೆಯಷ್ಟೇ ಅಲ್ಲ, ವಿದೇಶಗಳ ಜನರಿಗೂ ಹೊಟ್ಟೆ ತುಂಬಿಸುತ್ತಿದ್ದಾರೆ. ದೇಶದಿಂದ ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಗೆ ಪ್ರತಿವರ್ಷ ಆಹಾರ ಧಾನ್ಯ ರಫ್ತು ಮಾಡಲಾಗುತ್ತದೆ. ಇದಕ್ಕೆಲ್ಲ ಮೂಲ ಕಾರಣ ನಮ್ಮ ಕೃಷಿಕರು. ಪ್ರಯೋಗಾಲಯದಲ್ಲಿ ಲಸಿಕೆ ಕಂಡು ಹಿಡಿಯಬಹುದು. ಆದರೆ, ಪ್ರಯೋಗಾಲಯದಲ್ಲಿ ರಾಗಿ ಬೆಳೆಯಲು ಸಾಧ್ಯವಿಲ್ಲ ಎಂದರು.
ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರು ರೈತರ ಮೇಲಿನ ಕಾಳಜಿಯಿಂದ ಕೃಷಿ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದರು. ಪ್ರತಿಯೊಬ್ಬ ರೈತರು ನಿರ್ಭಿತಿಯಿಂದ ಕೃಷಿ ಮಾಡಲು ಶ್ರಮಿಸಿದ್ದರು. ನಾನು ಸಾಂವಿಧಾನಿಕ ಎಸಿ ಹುದ್ದೆಯಲ್ಲಿರಬಹುದು. ಆದರೆ, ಎಲ್ಲ ದೊಡ್ಡ ಹುದ್ದೆ, ಅರ್ಹತೆಗಳಿಗಿಂತ ರೈತರ ಅರ್ಹತೆ ಬಹಳ ದೊಡ್ಡದು ಎಂದು ಹೇಳಿದರು.

ರೈತರ ಸಮಸ್ಯೆ ಆಲಿಸಿ ಪರಿಹರಿಸುವುದು ಜಿಲ್ಲಾಡಳಿತದ ಜವಾಬ್ದಾರಿ. ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. 4873 ಪಹಣಿಗಳು ಪೆಂಡಿಂಗ್‌ ಇದ್ದು,ಅವುಗಳನ್ನೆಲ್ಲ ಬೇಗ ವಿಲೇವಾರಿಗೊಳಿಸಲಾಗುವುದು. ವೈಜ್ಞಾನಿಕವಾಗಿ ರೈತರು ಕೃಷಿ ಮಾಡಿದರೆ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ ಎಂದು ತಿಳಿಸಿದರು.ಗಂಗಾವತಿ ಕೃಷಿ ಕಾಲೇಜಿನ ಕೀಟನಾಶಕ ವಿಭಾಗದ ಮುಖ್ಯಸ್ಥ ಬದ್ರಿಪ್ರಸಾದ್‌ ಪಿ.ಆರ್‌. ಮಾತನಾಡಿ, ರೈತರು ಆಧುನಿಕ ತಂತ್ರಜ್ಞಾನದೊಂದಿಗೆ ಹೊಸ ಮಿಶ್ರ ಬೇಸಾಯ ಕ್ರಮಗಳನ್ನು ಅನುಸರಿಸಿದರೆ ಆದಾಯ ಗಳಿಸಲು ಸಾಧ್ಯ. ಎಷ್ಟು ಹೊಲ ಇರಬೇಕು ಎನ್ನುವುದು ಮುಖ್ಯವಲ್ಲ ಎಂದರು.
ಪ್ರಗತಿಪರ ರೈತ ರಮಾಕಾಂತ ಕೊನೆರು ಮಾತನಾಡಿ, ಭತ್ತ ಬೆಳೆಯುವ ರೈತರು 15048 ಆರ್‌ಎನ್‌ಆರ್‌ ತಳಿಯ ಭತ್ತ ಬೆಳೆಯಬೇಕು. ಇದರಿಂದ ಶೇ 50ರಷ್ಟು ನೀರು ಉಳಿಸಬಹುದು ಎಂದು ತಿಳಿಸಿದರು.

ರಾಯಚೂರು ಕೃಷಿ ಕಾಲೇಜಿನ ವಿಜ್ಞಾನಿ ಬಸವಣ್ಣೆಪ್ಪ ಮಾತನಾಡಿ, ಭತ್ತ ಬೆಳೆಯುವವರು ಸ್ವಲ್ಪ ಇಳಿಜಾರಿನಲ್ಲಿ ಬೆಳೆಸಬೇಕು. ಸೋನಾ ಮಸೂರಿ ಬೆಳೆಸುವವರು ಜೂನ್‌ 30ರೊಳಗೆ ಬೆಳೆಯಬೇಕು. ಉಳಿದ ತಳಿಗಳನ್ನು ಆಗಸ್ಟ್‌ 15ರ ವರೆಗೆ ಬೆಳೆಸಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ಮಾತನಾಡಿ, ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ರೈತರ ದಿನ ಆಚರಿಸಲಾಗುತ್ತದೆ. ಅವರು ಜಮೀನ್ದಾರಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ್ದರು. ಕೃಷಿ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದರು ಎಂದರು.


ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ,
ಸಹಾಯಕ ಕೃಷಿ ನಿರ್ದೇಶಕ ಕೆ. ವಾಮದೇವ, ಇನ್ನರ್‌ ವೀಲ್‌ ಕ್ಲಬ್‌ ಜಿಲ್ಲಾಧ್ಯಕ್ಷೆ ಡಾ. ಮಾಧವಿ, ಹೊಸಪೇಟೆ ಘಟಕದ ಅಧ್ಯಕ್ಷೆ ರೇಖಾ ಪ್ರಕಾಶ್‌ ವೇದಿಕೆಯಲ್ಲಿದ್ದರು. ಇನ್ನರ್‌ ವೀಲ್‌ ಕ್ಲಬ್‌ನಿಂದ ಹತ್ತು ರೈತ ಮಹಿಳೆಯರಿಗೆ ನೇಗಿಲು ವಿತರಿಸಲಾಯಿತು. ಸಹಾಯಕ ಪ್ರಾಧ್ಯಾಪಕ ಟಿ.ಎಚ್‌. ಬಸವರಾಜ ನಿರೂಪಿಸಿದರು. ‘ಪ್ರಜಾವಾಣಿ’ ಜಿಲ್ಲಾ ಹಿರಿಯ ವರದಿಗಾರ ಶಶಿಕಾಂತ ಎಸ್‌. ಶೆಂಬೆಳ್ಳಿ, ಸ್ವಾಗತಿಸಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ವಾಮದೇವ ವಂದಿಸಿದರು. ಕೃಷಿ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಬಸವರೆಡ್ಡಿ ಹಾಗೂ ಅಧಿಕಾರಿ ವರ್ಗದವರು ಇದ್ದರು. ಸಂಗೀತ ಶಿಕ್ಷಕ ಜಿ. ಮಾರುತಿರಾವ್‌ ಅವರು ನಾಡಗೀತೆ, ರೈತಗೀತೆ ಹಾಡಿದರು. ಭೂಮಿಕಾ ಅವರು ಪ್ರಾರ್ಥನೆ ಗೀತೆ ಹಾಡಿದರು. ಇದೇ ವೇಳೆ ರೈತರಿಗೆ ಆಯುಷ್‌ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.