ಬಳ್ಳಾರಿ,ಜ.17(ಕರ್ನಾಟಕ ವಾರ್ತೆ): ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 2021-22 ನೇ ಸಾಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಜಾನಪದ ಕಲಾ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಅರ್ಹ ಜಾನಪದ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಾರ್ತಾ ಇಲಾಖೆ, ಸಂಗೀತ ಮತ್ತು ನಾಟಕ ಅಕಾಡೆಮಿ ಅಡಿಯಲ್ಲಿ ನೊಂದಣಿಯಾಗಿ ಈಗಾಗಲೇ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜಾನಪದ ಕಲಾತಂಡದ ಮೂಲಕ ಪ್ರದರ್ಶನವನ್ನು ನೀಡಿರುವ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ಇಚ್ಛೆಯುಳ್ಳವರು ಅರ್ಜಿಗಳನ್ನು ಐಇಸಿ ವಿಭಾಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಕಛೇರಿ ಸಮಯದಲ್ಲಿ ಪಡೆದುಕೊಂಡು, ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಜ.24 ರೊಳಗಾಗಿ ಖುದ್ದಾಗಿ ಸಲ್ಲಿಸಲು ಸೂಚಿಸಿದೆ.
ಕಲಾತಂಡದ ಅಧೀಕೃತ ನೊಂದಣಿಯಾಗಿರಬೇಕು, ಇಲಾಖೆಯವರು ಸೂಚಿಸಿದ ಹಳ್ಳಿಗಳಲ್ಲಿ ಕಾರ್ಯಕ್ರಮ ನಡೆಸುವುದು, ಪ್ರತಿದಿನ ಎರಡು ಕಾರ್ಯಕ್ರಮಗಳನ್ನು ನಡೆಸುವುದು, ಪ್ರತಿ ತಂಡದಲ್ಲಿ 8 ಜನ ಒಳಗೊಂಡಿರಬೇಕು (ಕನಿಷ್ಠ ಇಬ್ಬರು ಮಹಿಳಾ ಕಲಾವಿದರು ಕಡ್ಡಾಯ), ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ತಂಡದ ಖಾತೆ ಪಾಸ್‍ಬುಕ್ ನೊಂದಣಿಯಾಗಿರಬೇಕು ಹಾಗೂ ಕಲಾ ತಂಡದ ಪಾನ್‍ಕಾರ್ಡ್ ಹೊಂದಿರಬೇಕು.
ದಾಖಲಾತಿಗಳು ನಿಯಮಾನುಸಾರ ಇದ್ದ ತಂಡಗಳಿಗೆ ಜಿಲ್ಲಾಮಟ್ಟದಲ್ಲಿ ಆಯ್ಕೆ ಸಮಿತಿಯ ಉಪಸ್ಥಿತಿಯಲ್ಲಿ ಕಲಾಪ್ರದರ್ಶನದ ಮೂಲಕ ಆಯ್ಕೆ ಮಾಡಲಾಗುವುದು ಮತ್ತು ಹೆಚ್ಚಿನ ಮಾಹಿತಿಗಾಗಿ ದೂ.9845715229 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
–––––