ವಿಜಯನಗರ ( ಹೂವಿನ ಹಡಗಲಿ )
(ಇದು ಸಮಯ ಬಿಗ್ 3 ಇಂಪ್ಯಾಕ್ಟ್ )
ಹೌದು ಹಾವೇರಿ ಮತ್ತು ವಿಜಯನಗರ ಜಿಲ್ಲೆಗಳ ಮಧ್ಯಭಾಗದಲ್ಲಿರುವ ಹರಿವಿ ಮತ್ತು ಹರನಗಿರಿ ಗ್ರಾಮಗಳ ಮಧ್ಯೆ ಹರಿಯುವ ತುಂಗಭದ್ರ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಇದು. ಈ ಸೇತುವೆ 2015ರ ಪೂರ್ವದಲ್ಲಿ ನಿರ್ಮಾಣವಾಗಿದ್ದರೂ ಎರಡು ಮೂರು ವರ್ಷಗಳ ಕಾಲ ಎರಡು ಬದಿಯಲ್ಲಿ ಸಂಪರ್ಕ ರಸ್ತೆಗಳು ಇರಲಿಲ್ಲ.
ಹಾಗಾಗಿ ಈ ಸೇತುವೆ ದಾಟಬೇಕಾದರೆ ಎರಡು ಬದಿಯಲ್ಲಿ ಏಣಿಯ ಮೂಲಕ ಹತ್ತಿ, ಏಣಿಯ ಮೂಲಕವೇ ಇಳಿದು ಬೇರೆ ಬೇರೆ ಊರಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಆ ಕಾಲದಲ್ಲಿ ಇತ್ತು.
32 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ ದಾಟಬೇಕಾದರೆ ಯಮ ಯಾತನೆ ಅನುಭವಿಸಬೇಕಾದ ಅನಿವಾರ್ಯತೆ ಅಂದಿಗೆ ಇಲ್ಲಿನ ಜನಸಾಮಾನ್ಯರಿಗೆ ಇತ್ತು.
ಈ ಸೇತುವೆ ದಾಟುವ ಸಂದರ್ಭದಲ್ಲಿ ಮಹಿಳೆಯರು ಮತ್ತು ವೃದ್ಧರು ಕೈ ಕಾಲು ಮುರಿದುಕೊಂಡ ಅದೆಷ್ಟು ಉದಾಹರಣೆಗಳು ಅಲ್ಲಿದ್ದವು. ಆಕಸ್ಮಿಕವಾಗಿ ಈ ಸ್ಥಳಕ್ಕೆ ನಾನು ಭೇಟಿ ನೀಡಿದಾಗ ಈ ವಿಷಯ ನಮ್ಮ ಗಮನಕ್ಕೆ ಬಂದಿತ್ತು.
ಕೈಯಲ್ಲಿ ಕ್ಯಾಮೆರಾ ಇರಲಿಲ್ಲ, ಲೋಗೋ ಮೈಕ್ ಕೂಡ ಇರಲಿಲ್ಲ. ಕೈಯಲ್ಲಿ ಇದ್ದಿದ್ದು ಒಂದು ಮೈಕ್ರೋಮ್ಯಾಕ್ಸ್ ಮೊಬೈಲ್ ಹ್ಯಾಂಡ್ಸೆಟ್ ಮಾತ್ರ, ಅದರ ಜೊತೆ ಈ ಸಮಸ್ಯೆಯ ಮೇಲೆ ಬೆಳಕು ಚೆಲ್ಲಬೇಕು ಎನ್ನುವ ಕಾಳಜಿ ನನ್ನಲ್ಲಿ ಇತ್ತು. ಆ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ ಅಲ್ಲಿದ್ದ ಜನ ಸಾಮಾನ್ಯರು ಅನುಭವಿಸುತ್ತಿದ್ದಂತ ಗೋಳನ್ನ ಚಿತ್ರೀಕರಿಸಿಕೊಂಡು ಬಳ್ಳಾರಿಗೆ ಬಂದೆ. ಆ ಸಂದರ್ಭದಲ್ಲಿ ಬಿಗ್ ತ್ರಿಗೆ ಹೆಸರುವಾಸಿಯಾದ ಸಮಯ ಸುದ್ದಿ ವಾಹಿನಿಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ನಾನು, ಸುದ್ದಿ ಮನೆಗೆ ಈ ಸಮಸ್ಯೆಯನ್ನು ಹೊತ್ತೊಯ್ದೆ. ನಮ್ಮ ಸಮಯ ವಾಹಿನಿಯ ಬಿಗ್ 3 ಹೀರೋ ಎಂದೇ ಖ್ಯಾತಿ ಪಡೆದಿದ್ದ ಜಯಪ್ರಕಾಶ್ ಶೆಟ್ಟಿ ಅವರು ಸಮಸ್ಯೆ ಮೇಲೆ ಬೆಳಕು ಚೆಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಅಬ್ಬರಿಸಿ ಬೊಬ್ಬಿರಿದರು.
ಸುದ್ದಿಗೆ ಸ್ಪಂದನೆ ಎಂಬಂತೆ ಧಾರವಾಡ. ಚಿತ್ರದುರ್ಗ. ಬೆಂಗಳೂರಿನಿಂದ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಸೇತುವೆಯ ಎರಡು ಬದಿಯ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದರು. ಆ ಬಳಿಕ ಜನಸಾಮಾನ್ಯರ ಸಂಚಾರಕ್ಕೆ ಈ ಸೇತುವೆ ಯೋಗ್ಯವಾಯಿತು. ಇದಕ್ಕೆ ಕಾರಣ ಸಮಯ ಬಿಗ್ 3 ಮತ್ತು ಜಯಪ್ರಕಾಶ್ ಶೆಟ್ಟಿ ಅವರು.
ಮತ್ತೊಂದು ಬೇಸರದ ಸಂಗತಿ ಏನೆಂದರೆ ಸಂಪರ್ಕ ಸೇತುವೆಯ ಮುಂದಿನ ಎರಡು ಬದಿಯ ರಸ್ತೆಗಳು ಸುಸಜ್ಜಿತವಾಗಿ ನಿರ್ಮಾಣ ಆಗದೆ ಇರುವುದು. ಇದಕ್ಕೆ ಕಾರಣ ಏನು ಗೊತ್ತಿಲ್ಲ. ಆದಷ್ಟು ಬೇಗ ಈ ಸೇತುವೆಯ ಎರಡು ಸಂಪರ್ಕ ರಸ್ತೆಗಳು ಸುಸಜ್ಜಿತವಾಗಿ ನಿರ್ಮಾಣವಾಗಬೇಕೆನ್ನುವುದು ನಮ್ಮ ಆಸೆ. ಏಳು ವರ್ಷಗಳ ಹಿಂದೆ ಮಾಡಿದ ನನ್ನದೊಂದು ಸಣ್ಣ ಅಳಿಲು ಸೇವೆಯ ಫಲವಾಗಿ, ಇಂದು ನನ್ನ ಕಾರು ಅದೇ ಸೇತುವೆಯ ಮೇಲೆ ಪ್ರಯಾಣಿಸಬೇಕಾದ ಸಂದರ್ಭ ಕೂಡಿಬಂತು. ನಾವು ಮಾಡುವ ಕೆಲಸದಿಂದ ಎಷ್ಟು ಆದಾಯ ಸಿಗುತ್ತೋ ಗೊತ್ತಿಲ್ಲ. ಆದರೆ ಆದರಿಂದ ಸಿಗುವ ನೆಮ್ಮದಿ ಮಾತ್ರ ಬೆಲೆ ಕಟ್ಟಲಾಗದು. ಅಂತದೊಂದು ಅನುಭವ ಇಂದು ನನಗಾಯಿತು.
(ನಾನು ಈ ಸಮಸ್ಯೆ ಸುದ್ದಿಯತ್ತ ಗಮನ ಹರಿಸಲು ಕಾರಣವಾದ ಹರವಿಯ ರಾಜು ತಳವಾರ ಮತ್ತು ನಮ್ಮ ಸುದ್ದಿಮನೆಯಲ್ಲಿ ಈ ಸುದ್ದಿಗೆ ಜೀವ ತುಂಬಿದ ನಿತಿನ್ ಮತ್ತು ದೀಪಕ್ ಡಿಸೋಜ ಅವರಿಗೆ ತುಂಬು ಹೃದಯದ ಧನ್ಯವಾದಗಳು)
ವರದಿ. ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ್….✒️✒️✒️✒️